ಮುಂಬೈಯಲ್ಲಿ ಅಪರೂಪದ ಲಿವರ್ ಸ್ವಾಪ್ ಶಸ್ತ್ರಚಿಕಿತ್ಸೆ: ಗಂಡಂದಿರ ಜೀವ ಉಳಿಸಿದ ಪತ್ನಿಯರು

ಮುಂಬೈಯಲ್ಲಿ ಅಪರೂಪದ ಲಿವರ್ ಸ್ವಾಪ್ ಶಸ್ತ್ರಚಿಕಿತ್ಸೆ: ಗಂಡಂದಿರ ಜೀವ ಉಳಿಸಿದ ಪತ್ನಿಯರು

ಮುಂಬೈ: ವೈದ್ಯಕೀಯ ಇತಿಹಾಸದಲ್ಲೇ ಅಪರೂಪವಾದ ಘಟನೆ ಮುಂಬೈನಲ್ಲಿ ನಡೆದಿದೆ. ನವಿ ಮುಂಬೈಯ ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರು ಪತ್ನಿಯರು ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿ, ಪರಸ್ಪರದ ಗಂಡಂದಿರ ಜೀವ ಉಳಿಸಿದ್ದಾರೆ.

ಮಹಾರಾಷ್ಟ್ರದ ಚಿಪ್ಲುನ್ ಮೂಲದ 53 ವರ್ಷದ ಮಹೇಂದ್ರ ಗಾಮರೆ ಹಾಗೂ ನಾಂದೇಡಿನ 41 ವರ್ಷದ ಪವನ್ ಥಿಗ್ಲೆ, ಇಬ್ಬರೂ ಅಂತಿಮ ಹಂತದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಕುಟುಂಬದಲ್ಲೇ ಹೊಂದಾಣಿಕೆಯ ದಾತರಿಲ್ಲದ ಕಾರಣ, ಶಸ್ತ್ರಚಿಕಿತ್ಸೆಗೆ ಅಡಚಣೆ ಎದುರಾಯಿತು. ಇದೇ ಸಂದರ್ಭದಲ್ಲಿ, ಅವರ ಪತ್ನಿಯರಾದ ಜೂಹಿ ಗಾಮರೆ ಮತ್ತು ಭವನಾ ಥಿಗ್ಲೆ ಅವರು ಮುಂದೆ ಬಂದು ಪರಸ್ಪರದ ಗಂಡಂದಿರಿಗೆ ಲಿವರ್ ದಾನ ಮಾಡಲು ಒಪ್ಪಿಕೊಂಡರು.

ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದ ಡಾ. ಶರಣ್ ನಾರುಟೆ ಹಾಗೂ ಸಹವೈದ್ಯರು ಒಟ್ಟು 10–12 ಗಂಟೆಗಳ ಕಾಲ ನಾಲ್ಕು ಆಪರೇಷನ್ ಥಿಯೇಟರ್‌ಗಳಲ್ಲಿ ಸಮಕಾಲೀನ ಶಸ್ತ್ರಚಿಕಿತ್ಸೆ ನಡೆಸಿದರು.

ಶಸ್ತ್ರಚಿಕಿತ್ಸೆಯ ಬಳಿಕ ನಾಲ್ವರೂ ಶೀಘ್ರ ಗುಣಮುಖರಾದರು. ಗಂಡಂದಿರು 11 ದಿನಗಳಲ್ಲೇ ಚೇತರಿಸಿಕೊಂಡರೆ, ಪತ್ನಿಯರು ವಾರದೊಳಗೆ ಚೇತರಿಸಿಕೊಂಡರು.

ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ