ಬೆಂಗಳೂರು, ಸೆಪ್ಟೆಂಬರ್ 18: ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ ಯೋಗ ಗುರು ನಿರಂಜನಾ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹದಿನೇಳು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಬಾಲಕಿ ಮಾತ್ರವಲ್ಲದೆ, ಯೋಗ ಕೇಂದ್ರಕ್ಕೆ ಬರುತ್ತಿದ್ದ ಸುಮಾರು ಎಂಟು ಮಹಿಳೆಯರು ಮತ್ತು ಯುವತಿಯರ ಮೇಲೂ ಅತ್ಯಾಚಾರ ಎಸಗಿರುವುದು ಬಹಿರಂಗವಾಗಿದೆ.

ಯೋಗ ಗುರು ನಿರಂಜನಾ ಮೂರ್ತಿ, “ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿಸುತ್ತೇನೆ, ಸರ್ಕಾರಿ ಕೆಲಸವೂ ಸಿಗಬಹುದು” ಎಂದು ನಂಬಿಸಿ, ಕೇಂದ್ರಕ್ಕೆ ಬರುತ್ತಿದ್ದ ಯುವತಿಯರು ಮತ್ತು ಮಹಿಳೆಯರನ್ನು ಶೋಷಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ದೂರಿನ ನಂತರ ರಾಜರಾಜೇಶ್ವರಿ ನಗರ ಪೊಲೀಸರು ಕೇಸ್ ದಾಖಲಿಸಿಕೊಂಡು, ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರ ಬಲೆ ಬಿದ್ದು ಬಂಧನಕ್ಕೊಳಗಾದನು. ಸದ್ಯ ತನಿಖೆ ಮುಂದುವರಿಯುತ್ತಿದ್ದು, ಇನ್ನಷ್ಟು ಶೋಷಿತರು ಮುಂದೆ ಬರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು, ಈ ಯೋಗ ಗುರುವಿನಿಂದ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೊಳಗಾದವರು ನೇರವಾಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ತಿಳಿಸಿದ್ದು, ದೂರುದಾರರ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

