ಬೀದರ್ನಲ್ಲಿ ನಡೆದ ದಾರುಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 27ರಂದು ಗಣೇಶ ಹಬ್ಬದ ದಿನ 7 ವರ್ಷದ ಸಾನ್ವಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದಾಳೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ನೆರೆಯ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಕೆಯ ಮಲತಾಯಿ ರಾಧಾಳೇ ಆಸ್ತಿಯ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದು ಮಗಳನ್ನು ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವುದು ಬಹಿರಂಗಗೊಂಡಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಮೂರನೇ ಮಹಡಿಯಿಂದ ಬಿದ್ದಿದ್ದರೂ ಸಾನ್ವಿ ಬದುಕಿದ್ದು, ರಸ್ತೆಯವರೆಗೆ ನಡೆದುಕೊಂಡು ಬಂದು ಜನರಿಂದ ನೆರವು ಕೇಳುತ್ತಿರುವುದು ಸ್ಪಷ್ಟವಾಗಿದೆ. ‘ಅಂಕಲ್, ಮೇಲಿಂದ ಬಿದ್ದೆ’ ಎಂದು ಕೈ ಚಾಚಿ ಸಹಾಯ ಕೇಳುತ್ತಿದ್ದ ವಿಡಿಯೋ ಹೃದಯ ಕಲುಕುವಂತಿದೆ. ಆ ಸಮಯದಲ್ಲಿ ಭೀಮರಾವ್ ಎಂಬ ವ್ಯಕ್ತಿ ಆಕೆಯನ್ನು ನೋಡಿ ಸಹಾಯ ಮಾಡಿದ್ದರು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಳು.
ಘಟನೆ ಬಹಿರಂಗವಾದ ನಂತರ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕ್ರೂರ ಕೃತ್ಯವು ಆಸ್ತಿಗಾಗಿ ಸಂಬಂಧಗಳು ಯಾವ ಮಟ್ಟಕ್ಕೆ ಹದಗೆಡಬಹುದು ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.

