ಉತ್ತರಾಖಂಡದ ಸೋನಪ್ರಯಾಗದಿಂದ ಕ ಕೇದಾರನಾಥದವರೆಗೆ 12.9 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಆದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಒಪ್ಪಂದ ದೊರೆತಿದೆ. ಸುಮಾರು ₹4,081 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ಜೊತೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ಬರಲಿದೆ.
ಪ್ರಸ್ತುತ 8-9 ಗಂಟೆಗಳ ಕಾಲವನ್ನೇ ತೆಗೆದುಕೊಳ್ಳುವ ಸೋನಪ್ರಯಾಗ–ಕೇದಾರನಾಥದ ದುಸ್ತರ ಪಾದಯಾತ್ರೆ, ರೋಪ್‌ವೇ ಕಾರ್ಯಾರಂಭವಾದ ಬಳಿಕ ಕೇವಲ 36 ನಿಮಿಷಗಳಲ್ಲಿ ಮುಗಿಯಲಿದೆ. ಪ್ರತಿ ದಿಕ್ಕಿಗೆ ಪ್ರತಿಗಂಟೆಗೆ ಸುಮಾರು 1,800 ಯಾತ್ರಿಕರನ್ನು ಸಾಗಿಸಲು ಸಾಮರ್ಥ್ಯ ಹೊಂದಿರುವ ಈ ಯೋಜನೆ ಆರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರದ 29 ವರ್ಷಗಳ ಕಾಲ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆ ಇದರ ನಿರ್ವಹಣೆಯನ್ನು ನೋಡಿಕೊಳ್ಳಲಿದೆ.
ಪ್ರತಿ ವರ್ಷ ಸುಮಾರು 20 ಲಕ್ಷ ಯಾತ್ರಿಕರು ಕೇದಾರನಾಥಕ್ಕೆ ಭೇಟಿ ನೀಡುವ ಹಿನ್ನೆಲೆ, ಈ ರೋಪ್‌ವೇ ಮೂಲಕ ಅವರ ಪ್ರಯಾಣ ಹೆಚ್ಚು ಸುರಕ್ಷಿತವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

