ಬೆಂಗಳೂರು: 2025ರ ಫೆಬ್ರವರಿಯಲ್ಲಿ ಬೆಂಗ್ಳೂರು ಮೆಟ್ರೋ ರೈಲು ನಿಗಮ (BMRCL) ಸಂಸ್ಥೆ, ದರ ನಿಗದಿ ಸಮಿತಿಯ (Fare Fixation Committee) ಶಿಫಾರಸುಗಳನ್ನು ಉಲ್ಲೇಖಿಸಿ #ನಮ್ಮಮೆಟ್ರೋ ದರವನ್ನು ಅಚ್ಚರಿಯ 130% ಹೆಚ್ಚಿಸಿತ್ತು. ಜನರ ಆಕ್ರೋಶ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್ತಿನ ಮನವಿಯ ನಂತರ, ಈ ಏರಿಕೆಯನ್ನು 71%ಕ್ಕೆ ಇಳಿಸಲು ಸಂಸ್ಥೆ ಬಾಧ್ಯವಾಯಿತು.

ದರ ಏರಿಕೆಯ ಹಿನ್ನೆಲೆಯಲ್ಲಿ, ದರ ನಿಗದಿ ಸಮಿತಿಯ ವರದಿ (FFC Report) ಬಿಡುಗಡೆ ಮಾಡುವಂತೆ ಆಗ್ರಹಿಸಿದರೂ BMRCL ನಿರಾಕರಿಸಿತ್ತು. ಇದರಿಂದ ಅಸಮಾಧಾನಗೊಂಡ ತೇಜಸ್ವಿ ಸೂರ್ಯ ಹೈಕೋರ್ಟ್ ಮೊರೆ ಹೋಗಿದರು. ಹೈಕೋರ್ಟ್ ವಿಚಾರಣೆಯ ಮುನ್ನೊಂದು ದಿನ, ಏಳು ತಿಂಗಳ ವಿಳಂಬದ ಬಳಿಕ, ಕೊನೆಗೂ ವರದಿಯನ್ನು BMRCL ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು.




🔸 ವರದಿಯ ಪ್ರಮುಖ ಅಂಶಗಳು:
- BMRCL ಸಂಸ್ಥೆಯೇ 105% ದರ ಏರಿಕೆ ಪ್ರಸ್ತಾಪಿಸಿತ್ತು ಎಂದು ವರದಿ ಬಹಿರಂಗಪಡಿಸಿದೆ.
- ದರ ನಿಗದಿ ಸಮಿತಿ (FFC) 7.5 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ 51.55% ಏರಿಕೆಯನ್ನು ಶಿಫಾರಸು ಮಾಡಿತ್ತು. ವರ್ಷಕ್ಕೆ ಸರಾಸರಿ 6.87% ಏರಿಕೆ ಅರ್ಥಪೂರ್ಣ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
- ಹೊಸ ದರಗಳನ್ನು 2 ಕಿ.ಮೀ. ವರೆಗೆ ₹210 ಹಾಗೂ 25 ಕಿ.ಮೀ. ಮೇಲ್ಪಟ್ಟ ಪ್ರಯಾಣಗಳಿಗೆ ಗರಿಷ್ಠ ₹790 ಎಂದು ನಿಗದಿಪಡಿಸಲಾಗಿದೆ.
- ಪ್ರಯಾಣಿಕರ ಕೈಗೆಟುಕುವಿಕೆ ಹಾಗೂ BMRCL ಸಂಸ್ಥೆಯ ದೀರ್ಘಾವಧಿ ಕಾರ್ಯಚಟುವಟಿಕೆ ಎರಡಕ್ಕೂ ಸಮತೋಲನ ಕಾಪಾಡುವ ಅಗತ್ಯವನ್ನು ಸಮಿತಿ ಒತ್ತಿಹೇಳಿದೆ.
- ಭಾನುವಾರ ಹಾಗೂ ರಾಷ್ಟ್ರೀಯ ರಜಾದಿನಗಳಲ್ಲಿ ದರ ರಿಯಾಯಿತಿ ನೀಡುವಂತೆ, ಜೊತೆಗೆ ವಾರ್ಷಿಕ ಸ್ವಯಂ ಏರಿಕೆಯ ಸೂತ್ರವನ್ನು ರೂಪಿಸುವಂತೆ ಶಿಫಾರಸು ಮಾಡಲಾಗಿದೆ.
ಜುಲೈ 16 ರಂದು ಕರ್ನಾಟಕ ಸರ್ಕಾರದಿಂದ ಅನುಮೋದನೆ ಪಡೆದಿದ್ದರೂ, ವರದಿ ಅಪ್‌ಲೋಡ್ ಮಾಡಲು ಸಂಸ್ಥೆಗೆ ಇನ್ನೂ ಎರಡು ತಿಂಗಳು ಹಿಡಿದಿರುವುದನ್ನು ತೇಜಸ್ವಿ ಸೂರ್ಯ ಅವರು ಟೀಕಿಸಿದರು. “ಸಂಸ್ಥೆಯ ಕಾರ್ಯನಿರ್ವಹಣೆಯ ವೇಗವನ್ನು ಇದು ತೋರಿಸುತ್ತದೆ,” ಎಂದು ಅವರು ವ್ಯಂಗ್ಯವಾಡಿದರು.
ಅಂತಿಮವಾಗಿ, ವರದಿ ಸಾರ್ವಜನಿಕ ವಲಯಕ್ಕೆ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, “ಜನತೆ ಏಳು ತಿಂಗಳ ಕಾಲ ನಿರೀಕ್ಷೆ ಮಾಡಬೇಕಾಯಿತು. ಹೈಕೋರ್ಟ್ ಮಧ್ಯಪ್ರವೇಶದಿಂದ ಮಾತ್ರ ಪಾರದರ್ಶಕತೆ ಸಾಧ್ಯವಾಯಿತು,” ಎಂದು ಸಂಸದ ತೇಜಸ್ವಿ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ವಿಚಾರವನ್ನು ಹಂಚಿಕೊಡಿದ್ದಾರೆ.

