ಪಾಕಿಸ್ತಾನದ ಐಎಸ್ಐ ಏಜೆಂಟ್‌ಗಳ ಪ್ರೇರಣೆಗೆ ಒಳಗಾಗಿ ಭಾರತದ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದ ನೇಪಾಳಿ ಪ್ರಜೆಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

ಬಂಧಿತನನ್ನು ಪ್ರಭಾತ್ ಕುಮಾರ್ ಚೌರಾಸಿಯಾ (43), ನೇಪಾಳದ ಬಿರ್ಗಂಜ ಮೂಲದವನು ಎಂದು ಗುರುತಿಸಲಾಗಿದೆ. ಆಗಸ್ಟ್ 28 ರಂದು ಈತನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಚೌರಾಸಿಯಾ ಕನಿಷ್ಠ 16 ಖಾಸಗಿ ಟೆಲಿಕಾಂ ಕಂಪನಿಗಳ ಸಿಮ್ ಕಾರ್ಡ್‌ಗಳನ್ನು ಆಧಾರ್ ವಿವರಗಳ ಆಧಾರದಲ್ಲಿ ಪಡೆದು ನೇಪಾಳಕ್ಕೆ ಕಳುಹಿಸಿದ್ದ. ಅಲ್ಲಿಂದ ಪಾಕಿಸ್ತಾನಕ್ಕೆ ಸಾಗಿಸಿ ಐಎಸ್ಐ ಏಜೆಂಟ್‌ಗಳಿಗೆ ಹಸ್ತಾಂತರಿಸಲಾಗಿತ್ತು. ಇವುಗಳಲ್ಲಿ 11 ಸಿಮ್‌ಗಳು ಪಾಕಿಸ್ತಾನದ ಲಾಹೋರ್, ಬಹಾವಲ್ಪುರ ಸೇರಿದಂತೆ ಹಲವು ಸ್ಥಳಗಳಿಂದ ವಾಟ್ಸಾಪ್ ಮೂಲಕ ಸಕ್ರಿಯವಾಗಿ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ.
🔸ಸೈನ್ಯ ಮಾಹಿತಿ ಸಂಗ್ರಹಣೆಯ ಪ್ರಯತ್ನ –
ಸಿಮ್ ಕಾರ್ಡ್‌ಗಳ ಮೂಲಕ ಐಎಸ್ಐ ಏಜೆಂಟ್‌ಗಳು ಭಾರತೀಯ ಸೇನಾ ಸಿಬ್ಬಂದಿಯನ್ನು ಸಂಪರ್ಕಿಸಿ ರಹಸ್ಯ ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದರು. ಬಂಧಿತನಿಂದ ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್ ಪ್ಯಾಕೆಟ್‌ಗಳು ಹಾಗೂ ಹಲವು ಪುರಾವೆಗಳು ವಶಪಡಿಸಿಕೊಳ್ಳಲಾಗಿದೆ.

