ದೇಶದ ಅತಿ ಉದ್ದದ 55 ಮೀಟರ್ ಗ್ಲಾಸ್ ಸ್ಕೈವಾಕ್ ಈಗ ವಿಶಾಖಪಟ್ಟಣದ ಕೈಲಾಸಗಿರಿ ಬೆಟ್ಟಗಳಲ್ಲಿ ಪ್ರವಾಸಿಗರಿಗಾಗಿ ತೆರೆದುಕೊಳ್ಳಲು ಸಜ್ಜಾಗಿದೆ. ಮುಂದಿನ ವಾರ ಅಧಿಕೃತವಾಗಿ ಉದ್ಘಾಟನೆಯಾಗಲಿರುವ ಈ ಆಕರ್ಷಕ ಗ್ಲಾಸ್ ಸೇತುವೆ, ಈಗಾಗಲೇ ಪ್ರಸಿದ್ಧಿ ಪಡೆದಿದ್ದ ಕೇರಳದ ವಾಗಮನ್‌ನ 38 ಮೀಟರ್ ಗ್ಲಾಸ್ ಸೇತುವೆಯನ್ನು ಮೀರಿಸಿದೆ.



ಈ ಗ್ಲಾಸ್ ಸ್ಕೈವಾಕ್‌ನಿಂದ ಬಂಗಾಳಕೊಲ್ಲಿಯ ಅದ್ಭುತ ನೋಟ, ನಗರದ ಸ್ಕೈಲೈನ್ ಹಾಗೂ ಪೂರ್ವ ಘಟ್ಟ (Eastern ghat) ಪರ್ವತ ಶ್ರೇಣಿಗಳ ಸೌಂದರ್ಯವನ್ನು ಮನಸಾರೆ ಅನುಭವಿಸಬಹುದು. ರೋಮಾಂಚನ ಹಾಗೂ ಸಾಹಸವನ್ನು ಮೆಚ್ಚುವ ಪ್ರವಾಸಿಗರಿಗೆ ಇದು ಹೊಸ ಅನುಭವವನ್ನು ನೀಡಲಿದ್ದು, ಛಾಯಾಗ್ರಾಹಕರಿಗೆ ಸಹ ಆಕರ್ಷಕ ಕೇಂದ್ರವಾಗಲಿದೆ.
ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳೊಂದಿಗೆ ನಿರ್ಮಿಸಲಾದ ಈ ಸ್ಕೈವಾಕ್, ರೋಮಾಂಚನದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿದೆ. ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ಪ್ರಕೃತಿಯ ಸುಂದರ ದೃಶ್ಯಾವಳಿಯನ್ನು ಆನಂದಿಸಬಹುದಾಗಿದೆ.

