ಆಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾನುವಾರ ರಾತ್ರಿ ಸಂಭವಿಸಿದ 6.3 ತೀವ್ರತೆಯ ಭೂಕಂಪನದಿಂದ ಭಾರೀ ಹಾನಿ ಉಂಟಾಗಿದೆ. ಈ ಪ್ರಕೃತಿ ವಿಕೋಪದಲ್ಲಿ ಕನಿಷ್ಠ 1,411 ಜನರು ಸಾವನ್ನಪ್ಪಿದ್ದು, 3,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕುನಾರ್ ಪ್ರಾಂತ್ಯ ಅತ್ಯಂತ ಹೆಚ್ಚು ಬಾಧಿತ ಪ್ರದೇಶವಾಗಿದೆ ಎಂದು ವರದಿಯಾಗಿದೆ.


ಈ ಹಿನ್ನೆಲೆ ಭಾರತವು ಮಾನವೀಯ ನೆರವಿನ ಕೈ ಚಾಚಿದ್ದು, ಕಾಬೂಲ್ಗೆ 21 ಟನ್ ನೆರವು ಸಾಮಗ್ರಿಗಳನ್ನು ರವಾನಿಸಿದೆ. ಭಾರತೀಯ ವಾಯುಪಡೆಯು ನೆರವು ಸಾಮಗ್ರಿಗಳನ್ನು ಗಗನಮಾರ್ಗದಿಂದ ಕಳುಹಿಸಿದ್ದು, ಇದರಲ್ಲಿ ಟೆಂಟ್, ಹಾಸಿಗೆ ಹೊದಿಕೆಗಳು, ಸ್ವಚ್ಛತೆ ಕಿಟ್ಗಳು, ನೀರು ಶುದ್ಧೀಕರಣ ಸಾಧನಗಳು, ಜನರೆಟರ್ಗಳು, ಔಷಧಿಗಳು ಹಾಗೂ ಇತರೆ ಅಗತ್ಯ ವಸ್ತುಗಳು ಸೇರಿವೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಕಾರ್ಯಾಚರಣೆಯನ್ನು ದೃಢಪಡಿಸಿದ್ದು, “ಭಾರತವು ಆಫ್ಘಾನಿಸ್ತಾನಕ್ಕೆ ಈ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ಸಾಮಗ್ರಿಗಳನ್ನು ಕಳುಹಿಸಲಾಗುವುದು” ಎಂದು ತಿಳಿಸಿದ್ದಾರೆ.

