ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಇರುವ ನಟ ದರ್ಶನ್ಗೆ ಜೈಲಿನಲ್ಲಿ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ ಎಂಬ ಗಂಭೀರ ದೂರು ಹೊರಬಿದ್ದಿದೆ.

ದರ್ಶನ್ ಪರ ವಕೀಲರು ಮಂಗಳವಾರ ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ, “ವಿಚಾರಣಾಧೀನ ಕೈದಿಗೆ ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಜೈಲು ಅಧಿಕಾರಿಗಳು ದರ್ಶನ್ಗೆ ಶೂ ಹಾಕಿಕೊಳ್ಳಲು ಬಿಡುವುದಿಲ್ಲ, ಊಟದ ತಟ್ಟೆಯನ್ನು ಕೊಠಡಿಗೆ ಎಸೆದು ಹೋಗುತ್ತಾರೆ” ಎಂದು ಆರೋಪಿಸಿದರು.
ಕಾನೂನಿನ ಅಡಿ ಸೌಲಭ್ಯ ಕೇಳಿದ ವಕೀಲರು
ದರ್ಶನ್ ಪರ ವಕೀಲರು, “ಸೆಲೆಬ್ರಿಟಿ ಸ್ಥಾನಮಾನ ಬೇಡ, ಆದರೆ ಕಾನೂನಿನ ಪ್ರಕಾರ ಸಿಗಬೇಕಾದ ಹಾಸಿಗೆ, ಹೊದಿಕೆ, ತಲೆದಿಂಬು, ಸ್ವೆಟರ್ ನೀಡಬೇಕು. ಸುಪ್ರೀಂ ಕೋರ್ಟ್ ಆರೋಪಿಗೆ ವಿಶೇಷ ಸೌಲಭ್ಯ ಬೇಡವೆಂದಿದೆ ಹೊರತು ಕನಿಷ್ಠ ಸೌಲಭ್ಯ ಕೊಡಬಾರದೆಂದಿಲ್ಲ” ಎಂದು ವಾದ ಮಂಡಿಸಿದರು.
ಸರ್ಕಾರದ ಪ್ರತಿವಾದ
ಸರ್ಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್, “ದರ್ಶನ್ ಜೈಲು ಸೇರಿದ ಎರಡು ದಿನದಲ್ಲೇ ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಆರೋಪಿಗಳನ್ನು ಹಾಸಿಗೆ-ಹೊದಿಕೆ ತರುವಂತಿಲ್ಲ. ಆರೋಪಿಗಳಿಗೆ ಕಾನೂನಿಗಿಂತ ದೊಡ್ಡ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಕೋರ್ಟ್ ಹಾಗೂ ಜೈಲಿನಲ್ಲಿ ವೀಡಿಯೋ ಕಾನ್ಫರೆನ್ಸ್ ಸೌಲಭ್ಯವಿದೆ, ವಕೀಲರು ಮತ್ತು ಕುಟುಂಬಕ್ಕೆ ಇ-ಮುಲಾಕಾತ್ ವ್ಯವಸ್ಥೆಯೂ ಇದೆ. ಹೀಗಾಗಿ, ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವುದು ಆಡಳಿತಾತ್ಮಕವಾಗಿ ಸೂಕ್ತ” ಎಂದು ಹೇಳಿದರು.
ಸ್ಥಳಾಂತರದ ಮನವಿ ಪ್ರಶ್ನಿಸಿದ ದರ್ಶನ್ ಪರ ವಕೀಲರು
ದರ್ಶನ್ ಪರ ವಕೀಲರು, “ಸುಪ್ರೀಂ ಕೋರ್ಟ್ ಕೇವಲ ಜಾಮೀನು ರದ್ದುಪಡಿಸಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಯಾವುದೇ ಆದೇಶ ನೀಡಿಲ್ಲ. ವಿಚಾರಣೆಗೆ ಹಾಜರಾಗಲು 310 ಕಿ.ಮೀ ದೂರದ ಬಳ್ಳಾರಿಯಿಂದ ಬೆಂಗಳೂರು ಬಂದು ಹೋಗುವುದು ಅಸಾಧ್ಯ. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವುದು ವಕೀಲರ ಜೊತೆ ಸಮಾಲೋಚನೆಗೆ ಅಡ್ಡಿ ತರುತ್ತದೆ” ಎಂದು ಆಕ್ಷೇಪಿಸಿದರು.
ವಿಚಾರಣೆಯನ್ನು ಮುಂದೂಡಿದ ಕೋರ್ಟ್
ಎರಡೂ ಬದಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಐ.ಪಿ. ನಾಯ್ಕ್, ವಿಚಾರಣೆಯನ್ನು ಬುಧವಾರ ಸಂಜೆ 4 ಗಂಟೆಗೆ ಮುಂದೂಡಿದರು.

