ಸುಳ್ಯದ ಉಬರಡ್ಕದಿಂದ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಧ್ವಜಸ್ತಂಭದ ನೂತನ ಮರವನ್ನು ಶೋಭಾಯಾತ್ರೆಯ ಮೂಲಕ ತರಲಾಗುತ್ತಿದೆ. ಸೆಪ್ಟೆಂಬರ್ 4, 2025ರ ಗುರುವಾರ ಈ ಧಾರ್ಮಿಕ ಹಾಗೂ ಭಕ್ತಿಪೂರ್ಣ ಕಾರ್ಯಕ್ರಮ ಜರುಗಲಿದೆ.

ನಗರದ ಹೃದಯ ಭಾಗವಾದ ಕೊಡಿಯಾಲ್ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರವು ಸುಮಾರು ಹತ್ತು ಶತಮಾನಗಳಿಗೂ ಹೆಚ್ಚು ಭವ್ಯ ಇತಿಹಾಸವನ್ನು ಹೊಂದಿದ್ದು, ಆದಿಶಕ್ತಿ ಶ್ರೀ ಭಗವತೀ ಮಾತೆಯು ಹದಿನಾಲ್ಕು ಸ್ವರೂಪಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಕೊಡಿಯಾಲ್ ಬೈಲ್, ಕದ್ರಿ, ಜೆಪ್ಪು, ಬೋಳಾರ, ಕಂಕನಾಡಿ, ನೆತ್ತರೆಕೆರೆ, ಸಜಿಪ, ಚೇಳೂರು, ಇರಾ ಕಲ್ಲಾಡಿ, ಪಜೀರು, ನೀರುಮಾರ್ಗ, ಪಡುಬೊಂಡಂತಿಲ, ಬೆಳ್ಳೂರು ಸೇರಿದಂತೆ 13 ಗ್ರಾಮಗಳು ಹಾಗೂ ಕೆಳಗಿನ ಮನೆ ತರವಾಡು, ಜಪ್ಪು, ವಿಷ್ಣುಮೂರ್ತಿ ಆದಿಕ್ಷೇತ್ರ, ಕಡವಿನ ಬಳಿ ಬೋಳಾರ ತರವಾಡು ಮತ್ತು ಕದ್ರಿ ಕಣ್ಣಬೆಟ್ಟು ತರವಾಡು ಮೊದಲಾದ 4 ತರವಾಡುಗಳು ಸೇರಿವೆ.
ಈ ಕ್ಷೇತ್ರಕ್ಕೆ ಪರಮಪಾವನತೆ ನೀಡಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ವತಃ ಭೇಟಿ ನೀಡಿದ್ದು, “ಒಂದೇ ಜಾತಿ – ಒಂದೇ ಮತ – ಒಂದೇ ದೇವರು” ಎಂಬ ವಿಶ್ವಮಾನವ ಸಂದೇಶವನ್ನು ಇಲ್ಲಿ ಸಾರಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮಗಿಷ್ಟವಾದ ವ್ರತ, ಹರಕೆಗಳನ್ನು ನೆರವೇರಿಸಿಕೊಂಡು ಆಶೀರ್ವಾದ ಪಡೆಯುತ್ತಾರೆ.
ಚೀರುಂಭ ಭಗವತಿ (ನಾಲ್ವರು), ಶ್ರೀ ಪಾಡಾಂಗರ ಭಗವತಿ (ಐವರು), ಶ್ರೀ ಪುಲ್ಲೂರಾಳಿ ಭಗವತಿ (ಐವರು) ಕಾರಣಿಕ ಮೆರೆದು ಭಕ್ತರ ರಕ್ಷಣೆಯ ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರಣದಿಂದ ಕ್ಷೇತ್ರವು “ಕೂಟಕ್ಕಳ” ಎಂದು ಪ್ರಸಿದ್ಧಿ ಪಡೆದಿದೆ.

