216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ

216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ

ಭರತನಾಟ್ಯದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದುಷಿ ದೀಕ್ಷಾ ಅವರು 216 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಆಗಸ್ಟ್ 21ರಂದು ಅಜ್ಜರ್ಕಾಡಿನ ಡಾ. ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ಆರಂಭಗೊಂಡ ಈ ಮ್ಯಾರಥಾನ್ ನೃತ್ಯ ಪ್ರದರ್ಶನ ಆಗಸ್ಟ್ 30ರಂದು ಮಧ್ಯಾಹ್ನ 3.30ಕ್ಕೆ ಯಶಸ್ವಿಯಾಗಿ ಸಂಪನ್ನವಾಯಿತು.

ಉಡುಪಿಯ ಅಜ್ಜರಕಾಡು ಜಿಲ್ಲಾ ಮೈದಾನದಲ್ಲಿ ಸಂಜೆ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೀಕ್ಷಾ ಅವರನ್ನು ಅಭಿನಂದಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಆ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಮನೀಶ್ ಝಪ್ಲೋಯ್ ಹಸ್ತಾಂತರಿಸಿದರು.

ಬ್ರಹ್ಮಾವರ ತಾಲೂಕಿನ ಅರೂರು ಗ್ರಾಮ ಮೂಲದ ದೀಕ್ಷಾ, ಮಂಗಳೂರು ಮೂಲದ ರೆಮೊನಾ ಎವೆಟ್ ಪೆರೇರಾ ಅವರ 170 ಗಂಟೆಗಳ 1 ತಿಂಗಳು ಹಿಂದಿನ ದಾಖಲೆಯನ್ನು ಮುರಿದು, ಸತತ ಎರಡು ದಿನಗಳ ಕಾಲ ಹೆಚ್ಚು ನೃತ್ಯಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

‘ನವ ರಸ ದೀಕ್ಷಾ ವೈಭವಂ’ ಶೀರ್ಷಿಕೆಯಡಿಯಲ್ಲಿ 9 ದಿನಗಳ ಕಾಲ ನಡೆದ ಈ ವಿಶೇಷ ಕಾರ್ಯಕ್ರಮದ ಅಂತಿಮ ಕ್ಷಣಗಳಲ್ಲಿ ನೂರಾರು ಜನರು ಹೂವು ಹಾಗೂ ಚಪ್ಪಾಳೆಗಳಿಂದ ದೀಕ್ಷಾಳನ್ನು ಕೊಂಡಾಡಿದರು. ಕನಸು ನನಸಾದ ಸಂತೋಷದಲ್ಲಿ ದೀಕ್ಷಾ ಭಾವುಕರಾದರು.

ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ