ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಾರಿಗೆ ತಂದಿರುವ FASTag ವಾರ್ಷಿಕ ಪಾಸ್ ಕೇವಲ ನಾಲ್ಕು ದಿನಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಈ ಪಾಸ್ ದೇಶದಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದು, ಹೆದ್ದಾರಿ ಪ್ರಯಾಣಿಕರಿಂದ ಅಪಾರ ಪ್ರತಿಕ್ರಿಯೆ ಪಡೆದಿದೆ.

ಜಾರಿಗೆ ಬಂದ ಮೊದಲ ದಿನವೇ ಸಂಜೆ 7 ಗಂಟೆಯೊಳಗೆ ಸುಮಾರು 1.4 ಲಕ್ಷ ಮಂದಿ ಪಾಸ್ ಖರೀದಿ ಮಾಡಿ ಸಕ್ರಿಯಗೊಳಿಸಿದ್ದು, 1.39 ಲಕ್ಷಕ್ಕೂ ಹೆಚ್ಚು ಟೋಲ್ ಪ್ಲಾಜಾ ವ್ಯವಹಾರಗಳು ದಾಖಲಾಗಿವೆ.
ತಮಿಳುನಾಡು ಹೆಚ್ಚು ಪಾಸ್ ಸಕ್ರಿಯಗೊಳಿಸುವಿಕೆ ಮತ್ತು ವ್ಯವಹಾರಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಅದರ ನಂತರ ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಸ್ಥಾನ ಪಡೆದಿವೆ. ಆಂಧ್ರ ಪ್ರದೇಶವೂ ಪ್ರಮುಖ ಸ್ಥಾನದಲ್ಲಿದೆ ಎಂದು NHAI ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಈ ಪಾಸ್ ವಿತರಿಸಲಾಗುತ್ತಿರುವ ‘ರಾಜಮಾರ್ಗಯಾತ್ರಾ’ ಮೊಬೈಲ್ ಆಪ್ ಕೂಡ ಜನಪ್ರಿಯತೆಯ ಮೆಟ್ಟಿಲೇರಿದ್ದು, ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಟ್ಟು ಶ್ರೇಯಾಂಕದಲ್ಲಿ #23 ಹಾಗೂ ಪ್ರವಾಸ ವಿಭಾಗದಲ್ಲಿ #2 ಸ್ಥಾನ ಗಳಿಸಿದೆ. 4.5 ಸ್ಟಾರ್ ರೇಟಿಂಗ್ ಪಡೆದಿರುವ ಈ ಆಪ್ ಬಳಕೆದಾರರಿಂದ ಪ್ರಶಂಸೆಗೆ ಪಾತ್ರವಾಗಿದೆ.
FASTag ವಾರ್ಷಿಕ ಪಾಸ್ ದೇಶದ ಸಂಚಾರ ವ್ಯವಸ್ಥೆಯನ್ನು ತಂತ್ರಜ್ಞಾನಾಧಾರಿತ, ಅಡೆತಡೆರಹಿತ ಹಾಗೂ ಸುಗಮಗೊಳಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಆಗಿದೆ.

