ದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಭದ್ರತೆ, ತಂತ್ರಜ್ಞಾನ, ಆರ್ಥಿಕತೆ ಮತ್ತು ಅಭಿವೃದ್ಧಿ ಕುರಿತಂತೆ ಹಲವಾರು ಘೋಷಣೆಗಳನ್ನು ಮಾಡಿದರು.

125ನೇ ಜನ್ಮದಿನವನ್ನು ಆಚರಿಸುತ್ತಿರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗವನ್ನು ಸ್ಮರಿಸಿ, ಕಲಂ 370 ರದ್ದುಪಡಿಸುವ ಮೂಲಕ “ಒಂದು ದೇಶ, ಒಂದು ಸಂವಿಧಾನ” ಕನಸು ಸಾಕಾರಗೊಂಡಿದೆ ಎಂದು ಹೇಳಿದರು. ಇತ್ತೀಚಿನ ಭೂಕುಸಿತ, ಮೇಘಸ್ಫೋಟ ಮುಂತಾದ ಪ್ರಕೃತಿ ವಿಪತ್ತುಗಳಿಂದ ಬಳಲುತ್ತಿರುವವರಿಗೆ ಸಂತಾಪ ಸೂಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಕ್ಷಣಾ ಮತ್ತು ಪುನರ್ವಸತಿ ಕಾರ್ಯದಲ್ಲಿ ತೊಡಗಿವೆ ಎಂದರು.
🔸“ಆಪರೇಶನ್ ಸಿಂದೂರ” ಯೋಧರಿಗೆ ವಂದನೆ ಸಲ್ಲಿಸಿದ ಅವರು, 22ರ ನಂತರ ಸೇನೆಗೆ ತಂತ್ರ ರೂಪಿಸುವ, ಗುರಿ ನಿಗದಿ ಹಾಗೂ ಸಮಯ ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದರು. ಅಣ್ವಸ್ತ್ರ ಬೆದರಿಕೆಯನ್ನು ಮುಂದೆಯೂ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
🔸ತಂತ್ರಜ್ಞಾನ ಕ್ಷೇತ್ರದಲ್ಲಿ ಆರು ಸೆಮಿಕಂಡಕ್ಟರ್ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ನಾಲ್ಕು ಹೊಸ ಘಟಕಗಳಿಗೆ ಅನುಮೋದನೆ ದೊರೆತಿದೆ. ಈ ವರ್ಷದಲ್ಲೇ “ಮೇಡ್ ಇನ್ ಇಂಡಿಯಾ” ಚಿಪ್ಗಳು ಮಾರುಕಟ್ಟೆಗೆ ಬರಲಿವೆ ಎಂದರು. ಶುದ್ಧ ಶಕ್ತಿಯ 50% ಗುರಿಯನ್ನು 2030ಕ್ಕೆ ಇಟ್ಟಿದ್ದರೂ, 2025ರಲ್ಲೇ ಸಾಧಿಸಿದ್ದೇವೆ ಎಂದು ಘೋಷಿಸಿದರು.
🔸ಅಂತರಿಕ್ಷ ಸಾಧನೆಗಳಲ್ಲಿ ಗಗನ್ಯಾನ್ ಯೋಜನೆ, ಸ್ವಂತ ಸ್ಪೇಸ್ಸ್ಟೇಷನ್ ನಿರ್ಮಾಣ, ಹಾಗೂ 300 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳ ಪಾಲ್ಗೊಳ್ಳುವಿಕೆ ಕುರಿತು ಉಲ್ಲೇಖಿಸಿದರು. ಗುಂಪು ನಾಯಕ ಶುಭಾನ್ಶು ಶುಕ್ಲಾ ಬಾಹ್ಯಾಕಾಶದಿಂದ ವಾಪಸಾಗಲಿದ್ದಾರೆ ಎಂದು ತಿಳಿಸಿದರು.
🔸 ಆರ್ಥಿಕ ಘೋಷಣೆಗಳಲ್ಲಿ, ₹12 ಲಕ್ಷದವರೆಗೆ ಆದಾಯ ತೆರಿಗೆ ಮುಕ್ತ ಮಾಡಿರುವುದಾಗಿ ತಿಳಿಸಿದ ಮೋದಿ, “ಈ ದೀಪಾವಳಿ ನಿನಗೆ ಡಬಲ್ ದೀಪಾವಳಿ. ದೇಶಕ್ಕೆ ದೊಡ್ಡ ಉಡುಗೊರೆ ಬರಲಿದೆ. ಜಿಎಸ್ಟಿ ಯಲ್ಲಿ ದೊಡ್ಡ ಸುಧಾರಣೆ ತಂದು, ಸಾಮಾನ್ಯ ಸೇವೆಗಳ ಮೇಲಿನ ತೆರಿಗೆ ಬಹಳಷ್ಟು ಕಡಿತಗೊಳ್ಳಲಿದೆ. ಇದು ಎಂಎಸ್ಎಂಇ ಹಾಗೂ ಆರ್ಥಿಕತೆಗೆ ಲಾಭಕರ” ಎಂದು ಹೇಳಿದರು.
ಯುಪಿಐ ಮೂಲಕ ಭಾರತವು ಜಗತ್ತಿನ 50% ರಿಯಲ್ಟೈಮ್ ವ್ಯವಹಾರ ನಡೆಸುತ್ತಿದೆ ಎಂದು ಅವರು ಹೆಮ್ಮೆಯಿಂದ ಪ್ರಸ್ತಾಪಿಸಿದರು.

