ರಷ್ಯಾದ ಕಮಚಟ್ಕಾ ಪ್ರಾಂತ್ಯದ ಸಮೀಪ ಭಾನುವಾರದಂದು 8.8 ರಿಕ್ಟರ್ ಶಕ್ತಿಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ ಸುಮಾರು 4 ಮೀಟರ್ ಎತ್ತರದ ಸುನಾಮಿ ಅಲೆಗಳು ಕಡಲ ತೀರದ ಪ್ರದೇಶಗಳನ್ನು ಅಪ್ಪಳಿಸಿವೆ. ಈ ಭೂಕಂಪ ಭೂಗರ್ಭದಲ್ಲಿ ಕೇವಲ 19.3 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಪರಿಣಾಮವಾಗಿ ತೀವ್ರ ಭೌಗೋಳಿಕ ಕಂಪನ ಉಂಟಾಗಿದೆ. ರಷ್ಯಾದ ಸವೇರೋ-ಕುರಿಲ್ಸ್ಕ್ ಪ್ರದೇಶದಲ್ಲಿ ಮನೆಗಳು, ಶಾಲಾ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಸ್ಥಳೀಯ ನಿವಾಸಿಗಳನ್ನು ತುರ್ತುವಾಗಿ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಈ ಭೂಕಂಪದ ಪರಿಣಾಮವಾಗಿ ಜಪಾನ್, ಅಮೆರಿಕ, ಹವಾಯ್, ಅಲೆಸ್ಕಾ, ನ್ಯೂಜಿಲ್ಯಾಂಡ್ ಹಾಗೂ ಇತರ ಪೆಸಿಫಿಕ್ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಯಿತು. ಜಪಾನಿನ ಉತ್ತರ ಭಾಗದಲ್ಲಿ ಸಮುದ್ರದ ಅಲೆಗಳು 30 ಸೆಂಟಿಮೀಟರ್ನಿಂದ 3 ಮೀಟರ್ ಎತ್ತರದವರೆಗೆ ದಾಖಲಾಗಿದ್ದು, ಕೆಲ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿಯೂ ಉಂಟಾಗಿದೆ. ಅಮೆರಿಕದ ಪಶ್ಚಿಮ ಕರಾವಳಿ ಹಾಗೂ ಹವಾಯ್ನಲ್ಲಿ ಸಾರ್ವಜನಿಕರಿಗೆ ಕಡಲ ತೀರದಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಲಾಗಿದೆ. ಸುನಾಮಿ ಅಲೆಗಳು ಮೆಕ್ಸಿಕೊ, ಪೆರು, ಚಿಲಿ ಹಾಗೂ ಇಕ್ವೆಡಾರ್ವರೆಗೆ ತಲುಪುವ ಸಾಧ್ಯತೆ ಇರುವುದರಿಂದ, ಈ ರಾಷ್ಟ್ರಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳು ಜಾರಿಯಲ್ಲಿವೆ.
ಈ ಭೂಕಂಪವು 1952ರ ನಂತರದ ರಷ್ಯಾದ ಅತಿದೊಡ್ಡ ಭೂಕಂಪವೆಂದು ಭೂಕಂಪ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ