ಬೆಂಗಳೂರು, ಜುಲೈ 3:
ಬಹು ನಿರೀಕ್ಷಿತ ‘ರಾಮಾಯಣ’ ಸಿನಿಮಾ ತನ್ನ ಮೊದಲ ಟೈಟಲ್ ಟೀಸರ್ ಅಥವಾ ಗ್ಲಿಂಪ್ಸ್ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕೇವಲ ಮೂರು ನಿಮಿಷದ ಈ ಟೀಸರ್ ಭಾರತೀಯ ಚಲನಚಿತ್ರ ಲೋಕದಲ್ಲಿ ಹೊಸ ಪರಿಕಲ್ಪನೆಗೆ ನಾಂದಿಯಾಗಿದೆ. ಟೀಸರ್ ಬಿಡುಗಡೆಯನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಐಮ್ಯಾಕ್ಸ್ ಥಿಯೇಟರ್‌ಗಳಲ್ಲಿ ಭವ್ಯವಾಗಿ ಆಯೋಜಿಸಲಾಗಿತ್ತು.


ನಿತೀಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯಾಧಾರಿತ ಸಿನಿಮಾವನ್ನು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಬಜೆಟ್‌ಗೊಳಗೊಂಡ ಚಿತ್ರವೆಂದು ಗುರುತಿಸಲಾಗಿದೆ — 800 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯೊಂದಿಗೆ! ಟೀಸರ್ ಆರಂಭದಲ್ಲೇ ಬ್ರಹ್ಮ, ವಿಷ್ಣು, ಮಹೇಶ್ವರರ ಭಾವಚಿತ್ರಗಳಿಂದ ಶುರುವಾಗಿ, ಅದ್ಭುತವಾದ ರಿಯಾಲಿಟಿ ಹಾಗೂ ಹೈ-ಕ್ವಾಲಿಟಿ ವಿಎಫ್‌ಎಕ್ಸ್ ವಿಶ್ವವೊಂದನ್ನು ಪ್ರೇಕ್ಷಕರ ಮುಂದೆ ಎತ್ತಿ ತೋರಿಸುತ್ತದೆ.
ಟೀಸರ್ ಕೊನೆಗೆ, ರಾಮನ ಪಾತ್ರದಲ್ಲಿರುವ ರಣ್‌ಬೀರ್ ಕಪೂರ್ ಬಿಲ್ಲು ಎಸೆದು ಹಾರುವ ದೃಶ್ಯ, ರಾವಣನ ಪಾತ್ರದಲ್ಲಿರುವ ಯಶ್ ಅವರ ಕಣ್ಣು ಮಾತ್ರವಷ್ಟೇ ತೆರೆದಿಡುವ ದೃಶ್ಯವನ್ನು ತೋರಿಸಲಾಗಿದೆ. ಇತರ ಪಾತ್ರಗಳ ಬಗ್ಗೆಯೂ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಚಿತ್ರಕ್ಕೆ ಹನ್ಸ್ ಜೈಮರ್ ಹಾಗೂ ಎ. ಆರ್. ರೆಹಮಾನ್ ಸಂಗೀತ ನೀಡಿದ್ದು, ಆಲಿಸ್ಕರ್ ವಿಜೇತ ಸ್ಟಂಟ್ ಕೋರಿಯೋಗ್ರಾಫರ್‌ಗಳು ಹಾಗೂ ಹಾಲಿವುಡ್‌ನ ಪ್ರತಿಷ್ಠಿತ ವಿಎಫ್‌ಎಕ್ಸ್ ತಂಡಗಳು ಸಹಭಾಗಿಯಾಗಿದ್ದಾರೆ. ಯಶ್ ಈ ಚಿತ್ರದಲ್ಲಿ ರಾವಣನಾಗಿ ಅಭಿನಯಿಸುವುದಷ್ಟೇ ಅಲ್ಲದೆ, ಅವರು ಸಹ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿನಿಮಾಗೆ ‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಉದ್ದೇಶಪೂರ್ಣ ಟ್ಯಾಗ್‌ಲೈನ್ ನೀಡಲಾಗಿದೆ.
‘ರಾಮಾಯಣ’ ಸಿನಿಮಾ 2026ರ ದೀಪಾವಳಿಗೆ ಪ್ರಥಮ ಭಾಗವಾಗಿ ತೆರೆಗೆ ಬರಲಿದ್ದು, 2027ರ ದೀಪಾವಳಿಗೆ ಎರಡನೇ ಭಾಗವನ್ನು ಬಿಡುಗಡೆ ಮಾಡುವ ಯೋಜನೆ ಇದೆ.