ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಗಳಿಗೆ ಸಂಬಂಧಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (Weather Based Crop Insurance Scheme – WBCIS) ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಕೃಷಿ ಇಲಾಖೆಯು ರೈತರಿಗೆ ಈ ಮಹತ್ವದ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದೆ. ಈ ಯೋಜನೆಯಡಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ಪಾವತಿ ಮಾಡಲು ಅವಕಾಶವಿದೆ.


ನೋಂದಣಿ ಪ್ರಕ್ರಿಯೆ 2025ರ ಜೂನ್ 24ರಿಂದ ಆರಂಭಗೊಂಡಿದ್ದು, ಜುಲೈ 31, 2025ರ ಒಳಗೆ ಪೂರ್ಣಗೊಳ್ಳಬೇಕು. ರೈತರು ಈ ಅವಧಿಯೊಳಗೆ ವಿಮೆ ಪಾವತಿಸಬೇಕಾಗುತ್ತದೆ. ಯೋಜನೆಯಡಿಯಲ್ಲಿ ಅಡಿಕೆ ಬೆಳೆಗಳಿಗೆ ಪ್ರತಿ ಎಕರಿಗೆ ₹2590.90 ಹಾಗೂ ಕಾಳುಮೆಣಸು ಬೆಳೆಗಳಿಗೆ ₹951.50ರಷ್ಟು ವಿಮೆ ಮೊತ್ತ ನಿಗದಿಪಡಿಸಲಾಗಿದೆ.
ವಿಮೆಗಾಗಿ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಹಣಿ ಪತ್ರ (RTC), ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಮತ್ತು ಪ್ರೂಟ್ ಐಡಿ ಸಂಖ್ಯೆ (FID) ಸೇರಿವೆ. ವಿಮೆ ಪಾವತಿಸುವ ಎಲ್ಲ RTC ಗಳಿಗೆ ಪ್ರೂಟ್ ಐಡಿ ಲಿಂಕ್ ಆಗಿರಬೇಕು. ಜಂಟಿ RTC ಇದ್ದಲ್ಲಿ, ಜಂಟಿ ಖಾತೆದಾರರ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಪ್ರೂಟ್ ಐಡಿ ಸಂಖ್ಯೆಯನ್ನೂ ಹಾಜರುಪಡಿಸುವುದು ಅಗತ್ಯ.
ಕೃಷಿ ಇಲಾಖೆ ವಿಶೇಷ ಸೂಚನೆಯಂತೆ, ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ಸಮೀಕ್ಷೆ ದಾಖಲಾಗಿರುವ RTCಗಳಿಗೆ ಮಾತ್ರ ವಿಮೆ ಪಾವತಿ ಮಾಡಲು ಅವಕಾಶ ಇದೆ. ಆದ್ದರಿಂದ, ರೈತರು ಸಮಯಕ್ಕೆ ಒಳಗಾಗಿ ತಮ್ಮ ದಾಖಲೆಗಳನ್ನು ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಹತ್ತಿರದ ಕೃಷಿ ಇಲಾಖೆ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದು.