
ನೀರಜ್ ಚೋಪ್ರಾ ಕ್ಲಾಸಿಕ್ ಎಂಬ ವಿಶೇಷ ಜಾವೆಲಿನ್ ಥ್ರೋ ಸ್ಪರ್ಧೆ ಮೇ 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಉತ್ಕೃಷ್ಟ ಕಾರ್ಯಕ್ರಮಕ್ಕೆ ವಿಶ್ವದ ಅನೇಕ ಉನ್ನತ ಮಟ್ಟದ ಜಾವೆಲಿನ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, ಜೂಲಿಯಸ್ ಯೆಗೋ, ಮತ್ತು ಥಾಮಸ್ ರೋಹ್ಲರ್ ಇದ್ದಾರೆ.


ಆದರೆ ಪ್ರಮುಖ ಸ್ಪರ್ಧಿಯೊಬ್ಬರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ. ಅವರೇ ಪಾಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಅರ್ಶದ್ ನದೀಮ್. ನದೀಮ್ ಅವರು ಮೇ 27 ರಿಂದ 31 ರವರೆಗೆ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ತಯಾರಿ ಮಾಡಿಕೊಳ್ಳುತ್ತಿರುವ ಕಾರಣ ಅವರು ಆಹ್ವಾನವನ್ನು ನಿರಾಕರಿಸಿದ್ದಾರೆ. ಅವರು ಮೇ 22 ರಂದು ದಕ್ಷಿಣ ಕೊರಿಯಾಗೆ ತರಬೇತಿಗಾಗಿ ಹೊರಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನ ಮೂಲದ ಸಂಘಟನೆಗೆ ಸಂಬಂಧವಿದೆ ಎಂಬ ವರದಿ ನಂತರ, ನದೀಮ್ ಅವರಿಗೆ ಆಹ್ವಾನ ನೀಡಿದ ನೀರಜ್ ಚೋಪ್ರಾವರ ನಿರ್ಧಾರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ಹಲವರು ನೀರಜ್ ಮತ್ತು ಅವರ ಕುಟುಂಬದವರ ಮೇಲೆಯೂ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿರುವ ನೀರಜ್ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಹೇಳಿಕೊಂಡಿದ್ದಾರೆ.
“ನಾನು ಅರ್ಶದ್ ನದೀಮ್ ಗೆ ಆಹ್ವಾನ ನೀಡಿದ ವಿಷಯವನ್ನು ಕೆಲವರು ಅರ್ಥಮಾಡಿಕೊಳ್ಳದೇ ಅತಿಯಾದ ಹಗೆ ಮತ್ತು ನಿಂದನೆ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬವನ್ನೂ ಈ ವಿಷಯದಲ್ಲಿ ಎಳೆದುಕೊಂಡಿದ್ದಾರೆ. ನಾನು ನೀಡಿದ ಆಹ್ವಾನ ಒಂದು ಕ್ರೀಡಾಪಟು ಮತ್ತೊಬ್ಬ ಕ್ರೀಡಾಪಟುವಿಗೆ ನೀಡಿದ ಶಿಷ್ಟಾಚಾರದ ಭಾಗವಾಗಿತ್ತಷ್ಟೇ ಹೊರತು ಮತ್ತೇನೂ ಅಲ್ಲ.”
ನೀರಜ್ ಚೋಪ್ರಾ ಅವರು “ಭಾರತ ಮತ್ತು ಅದರ ಹಿತಾಸಕ್ತಿಗಳು ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದೂ, “ಪಹಲ್ಗಾಂ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ಸಾಂತ್ವನ ಮತ್ತು ಪ್ರಾರ್ಥನೆಗಳು” ಎಂದಿದ್ದಾರೆ.
ಈ ನೀರಜ್ ಚೋಪ್ರಾ ಕ್ಲಾಸಿಕ್ ಅನ್ನು ನೀರಜ್ ಚೋಪ್ರಾ, JSW Sports, Athletics Federation of India (AFI) ಮತ್ತು World Athletics (WA) ಇವರುಗಳು ಸಂಘಟಿಸುತ್ತಿದ್ದಾರೆ. ಈ ಸ್ಪರ್ಧೆಯನ್ನು ಮೂಲತಃ ಪಂಚಕುಲದಲ್ಲಿ ಆಯೋಜಿಸಲು ಯೋಜಿಸಲಾಗಿತ್ತು, ಆದರೆ ಲೈಟಿಂಗ್ ಸಮಸ್ಯೆಯಿಂದಾಗಿ ಬೆಂಗಳೂರುಗೆ ಸ್ಥಳಾಂತರಿಸಲಾಗಿದೆ.
ಭಾರತದ ಕ್ರೀಡಾಭಿಮಾನಿಗಳು ಉನ್ನತ ಮಟ್ಟದ ಜಾವೆಲಿನ್ ಸ್ಪರ್ಧೆಯನ್ನು ನೇರವಾಗಿ ಕಂಡು ಆನಂದಿಸಬಹುದಾದ ಅಪರೂಪದ ಅವಕಾಶ ಇದಾಗಿದೆ.