
ಪಾಲಾ, ಕೇರಳ: ಕೇರಳದ ಪಾಲಾ ಬಾರ್ ಅಸೋಸಿಯೇಷನ್ ಇತಿಹಾಸ ನಿರ್ಮಿಸುವಂತಹ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಸಂಘದ ಎಲ್ಲಾ ಹುದ್ದೆಗಳಿಗೂ ಹಾಗೂ ಕಾರ್ಯಕಾರಿಣಿ ಸಮಿತಿಯ 15 ಸ್ಥಾನಗಳಿಗೂ ಮಹಿಳಾ ವಕೀಲರನ್ನೇ ಆಯ್ಕೆಮಾಡಲಾಗಿದೆ. ಇದು ದೇಶದಾದ್ಯಂತ ಮಹಿಳೆಯರ ಪ್ರತಿನಿಧಿತ್ವವನ್ನು ವಕೀಲರ ಸಂಘಗಳಲ್ಲಿ ಹೆಚ್ಚಿಸಲು ಆಗುತ್ತಿರುವ ಒತ್ತಾಸೆಗೆ ಪ್ರತಿಕ್ರಿಯೆಯಂತೆ ಮೂಡಿದೆ.


ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಡ್ವೊಕೇಟ್ ಉಷಾ ಮೆನನ್ ಉಷಸ್ ಅವರು 163 ಮತಗಳನ್ನು ಪಡೆದು ಗೆಲುವು ಸಾಧಿಸಿದರು, ಇತರ ಅಭ್ಯರ್ಥಿಯಾದ ಅಡ್ವೊಕೇಟ್ ಜೊಸಕುಟ್ಟಿ ಕುಳಿತೊಟ್ಟಂ ಅವರಿಗೆ ಕೇವಲ 70 ಮತಗಳು ಬಂದವು.
ಸಂಘದ ಇತರ ಪದಾಧಿಕಾರಿಗಳ ವಿವರ:
- ಅಧ್ಯಕ್ಷರು: ಉಷಾ ಮೆನನ್ ಉಷಸ್
- ಉಪಾಧ್ಯಕ್ಷರು: ಮಿನಿಮೋಲ್ ಸಿರಿಯಾಕ್ ವಳಿಯವೀಟಿಲ್
- ಕಾರ್ಯದರ್ಶಿ: ರಮ್ಯಾ ಆರ್ ಕಕ್ಕನಾಡು ಒಳಕೈಲ್
- ಸಹ ಕಾರ್ಯದರ್ಶಿ: ಪ್ರೇಜಿಷಾ ಜೋಸ್ ವಥಲ್ಲೂರು
- ಖಜಾಂಜಿ: ನಿಶಾ ನಿರ್ಮಲ ಜಾರ್ಜ್ ಪುತೆನ್ಪುರಕ್ಕಲ್
ಕಾರ್ಯಕಾರಿ ಸಮಿತಿ ಸದಸ್ಯರು:
ಮಹಿಳಾ ಪ್ರತಿನಿಧಿ: ಆಶಾ ರವಿ ಮುಲಂಜನಿಕ್ಕುನ್ನೆಲ್
ಕಿರಿಯ ಸದಸ್ಯರು :
- ದೀಪಾ ಎನ್. ಜಿ. ನ್ಜುಂಡನ್ಮಕ್ಕಲ್
- ಐರಿನ್ ಎಲಿಸಬೆತ್ ಬಿ ಮೂತ್ತಾಸ್ಸೆರಿಲ್
ಹಿರಿಯ ಸದಸ್ಯರು:
- ಗಾಯತ್ರಿ ರವೀಂದ್ರನ್ ವಂದನ್ನೂರ್
- ಮೆಗ್ಗಿ ಬಾಲರಾಮ್ ಎಝെರ್ವಯಲಿಲ್
- ಮಂಜುಷಾ ಕೆ. ಜಿ. ವಡಯಟ್ಟು
- ರಮ್ಯಾ ರೋಸ್ ಜಾರ್ಜ್ ಪೆರೆಕ್ಕಟ್ಟು ಸಂಜು ಪಿ. ಎಸ್. ಶ್ರೀನಿಲಯಂ
ಈ ಆಯ್ಕೆಗಳು ಕೇವಲ ನಿಯಮಿತ ಮೂರನೇ ಒಂದು ಭಾಗ ಮೀಸಲಾತಿಯನ್ನು ಮೀರಿದ ಬದಲಾವಣೆ ಮಾತ್ರವಲ್ಲ, ನ್ಯಾಯಾಂಗ ಕ್ಷೇತ್ರದಲ್ಲಿ ಲಿಂಗ ಸಮಾನತೆಗೆ ಹೊಸ ದಾರಿಯನ್ನೇ ತೋರಿಸುತ್ತವೆ. ಇತರ ರಾಜ್ಯಗಳ ಬಾರ್ ಅಸೋಸಿಯೇಷನ್ಗಳಿಗೆ “ಮಹಿಳೆಯರು ಕೇವಲ ಪಾಲುದಾರರು ಮಾತ್ರವಲ್ಲ, ಅವರು ನಾಯಕತ್ವವನ್ನು ನಿಭಾಯಿಸುವಷ್ಟು ಸಮರ್ಥರಾಗಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತಿದೆ.
ಸುಪ್ರೀಂ ಕೋರ್ಟ್ನಲ್ಲಿ ಮಹಿಳಾ ವಕೀಲರ ಪ್ರತಿನಿಧಿತ್ವ ಖಚಿತಪಡಿಸಬೇಕು ಎಂಬ ಬೇಡಿಕೆಗಳ ಕುರಿತು ಹಲವು ಮೊಕದ್ದಮೆಗಳು ಮುಂದುವರೆದಿವೆ. ಕಳೆದ ವರ್ಷ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಕನಿಷ್ಠ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ನಂತರದಲ್ಲಿ ದೆಹಲಿ ಹೈಕೋರ್ಟ್ ಹಾಗೂ ಕರ್ನಾಟಕ ಸೇರಿದಂತೆ ಹಲವಾರು ಬಾರ್ ಅಸೋಸಿಯೇಷನ್ಗಳಿಗೆ ವಿಸ್ತರಿಸಲಾಯಿತು.
ಈ ನಿಟ್ಟಿನಲ್ಲಿ ಪಾಲಾ ಬಾರ್ ಅಸೋಸಿಯೇಷನ್ ಕೈಗೊಂಡ ಈ ತೀರ್ಮಾನವು ಮಹಿಳಾ ಪ್ರತಿನಿಧಿತ್ವಕ್ಕೆ ಒಂದು ಬಲ ಸಿಕ್ಕಂತಾಗಿದೆ. ಕೇವಲ ಮೂರನೇ ಒಂದು ಭಾಗದಷ್ಟು ಮೀಸಲಾತಿಗೆ ಸೀಮಿತವಾಗದೆ, ಸಂಪೂರ್ಣ ಪದಾಧಿಕಾರಿ ತಂಡವನ್ನೂ ಮಹಿಳೆಯರಿಂದ ರಚಿಸಿರುವುದು ದೇಶದ ಇತರೆ ಬಾರ್ ಅಸೋಸಿಯೇಷನ್ಗಳಿಗೆ ಪ್ರೇರಣಾದಾಯಕವಾಗಲಿದೆ.
ನ್ಯಾಯಮಂಡಳಿ ಹಾಗೂ ಕಾನೂನು ವೃತ್ತಿಯಲ್ಲಿ ಲಿಂಗ ಸಮಾನತೆಗೆ ಇದು ಬಲವಾದ ನಿದರ್ಶನವಾಗಿ ಪರಿಗಣಿಸಲಾಗುತ್ತಿದೆ. ಲಿಂಗಸಮಾನತೆಯತ್ತ ಅಡಿಯಿಡುತ್ತಿರುವ ಈ ಬೆಳವಣಿಗೆಯು, ಭವಿಷ್ಯದ ಹೋರಾಟಗಳಿಗೆ ದಿಕ್ಕು ತೋರಿಸಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.