ಭೂಮಿಯ ಮೇಲಿನ ಅತ್ಯಂತ ದೊಡ್ಡ ಜೀವಿ ಯಾವುದು ಎಂದು ಯಾರನ್ನು ಕೇಳಿದರೂ, ಬ್ಲೂ ವೇಲ್ ಎಂದು ಥಟ್ಟನೆ ಹೇಳುತ್ತಾರೆ ಅಥವಾ ಅತಿ ಎತ್ತರದ ಮರಗಳ ಬಗ್ಗೆ ಯೋಚಿಸುತ್ತಾರೆ. ಆದರೆ, ವಾಸ್ತವದಲ್ಲಿ ಭೂಮಿಯ ಮೇಲಿನ ಅತಿ ದೊಡ್ಡ ಜೀವಿ ಭೂಮಿಯ ಒಳಗೆ ಬೆಳೆಯುತ್ತಿರುವ ಒಂದು ದೊಡ್ಡ ಶಿಲೀಂಧ್ರ. ಇದರ ಹೆಸರು ಅರ್ಮಿಲೇರಿಯಾ ಒಸ್ಟೋಯೇ (Armillaria ostoyae). ಇದನ್ನು ಹ್ಯುಮೊಂಗಸ್ ಫಂಗಸ್ ಎಂದು ಕರೆಯುತ್ತಾರೆ.



ಅಮೇರಿಕಾದ ಒರೆಗಾನ್ ರಾಜ್ಯದ ಮಾಲ್ಹೆಯರ್ ರಾಷ್ಟ್ರೀಯ ಅರಣ್ಯದಲ್ಲಿ (Malheur National Forest, Oregon, USA) ಈ ದೈತ್ಯ ಶಿಲೀಂಧ್ರವಿದೆ. ಇದು ಸುಮಾರು 965 ಹೆಕ್ಟೇರ್ ಅಂದರೆ 3.8 ಚದರ ಮೈಲಿ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿದೆ. ಅಂದರೆ ಇದು 1,600 ಫುಟ್ಬಾಲ್ ಮೈದಾನಗಳಷ್ಟು ದೊಡ್ಡದಾಗಿದೆ! ವಿಜ್ಞಾನಿಗಳು ಈ ಶಿಲೀಂಧ್ರದ ವಯಸ್ಸು ಕನಿಷ್ಟ 2,400 ವರ್ಷಗಳಿಂದ 8,650 ವರ್ಷಗಳ ವರೆಗೆ ಇರಬಹುದು ಎಂದು ಊಹಿಸುತ್ತಿದ್ದಾರೆ. ಇದು ಭೂಮಿಯಲ್ಲಿನ ಅತಿ ದೊಡ್ಡ ಮತ್ತು ಅತ್ಯಂತ ಪುರಾತನ ಜೀವಿಗಳಲ್ಲಿ ಒಂದು.

ಇದು ಹೇಗೆ ಇಷ್ಟು ದೊಡ್ಡದಾಯಿತು?
ಭೂಮಿಯ ಮೇಲಿನ ಪ್ರಾಣಿಗಳು ಅಥವಾ ಸಸ್ಯಗಳಿಗಿಂತ ವಿಭಿನ್ನವಾಗಿರುವ ಈ ಶಿಲೀಂಧ್ರವು, ಭೂಮಿಯ ಒಳಗೆ ಅಂದರೆ ಮಣ್ಣಿನ ಅಡಿಯಲ್ಲಿ ಬೆಳೆಯಲಾರಂಭಿಸುತ್ತದೆ. ಇದರ ಮೈಸಿಲಿಯಂ (Mycelium) ಎಂಬ ದಾರದಂತಿರುವ ತಂತುಗಳು, ಅರಣ್ಯದ ಮಣ್ಣಿನೊಳಗೆ ಹಬ್ಬಿ, ಮರಗಳ ಬೇರುಗಳನ್ನು ಆವರಿಸಿಕೊಂಡು ಬೆಳೆಯುತ್ತವೆ. ಈ ಶಿಲೀಂಧ್ರವು ಸಾವಿನಂಚಿನಲ್ಲಿರುವ ಅಥವಾ ಸತ್ತು ಕೊಳೆಯುತ್ತಿರುವ ಮರಗಳಿಂದ ತನಗೆ ಬೆಳೆಯುವುದಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತದೆ. ಆದರೆ, ಇದು ಜೀವಂತ ಮರಗಳ ಮೇಲೂ ದಾಳಿ ಮಾಡಿ ಅವುಗಳನ್ನು ಹಾಳುಮಾಡಬಹುದು. ಹಾಗಾಗಿ ಈ ಶಿಲೀಂಧ್ರದಿಂದ ಅರಣ್ಯಗಳಿಗೆ ದೊಡ್ಡ ಅಪಾಯವೂ ಉಂಟಾಗಬಹುದು.
ಇದು ಹೇಗೆ ಗೋಚರಿಸುತ್ತದೆ?

ಹ್ಯುಮೊಂಗಸ್ ಶಿಲೀಂಧ್ರದ ಹೆಚ್ಚಿನ ಭಾಗವು ಮಣ್ಣಿನೊಳಗೆ ಅಗೋಚರವಾಗಿ ಇರುತ್ತದೆ. ಆದರೆ, ಶರತ್ಕಾಲದ ವೇಳೆಗೆ, ಮಣ್ಣಿನ ಮೇಲ್ಭಾಗದಲ್ಲಿ ಹಾಗೂ ಸೋಂಕಿತ ಮರಗಳ ತುದಿಗಳಲ್ಲಿ ಚಿಕ್ಕ ಚಿಕ್ಕ, ಹಳದಿ-ಕಂದು ಬಣ್ಣದ ಶಿಲೀಂಧ್ರಗಳು ಬೆಳೆಯುತ್ತವೆ. ಇವುಗಳನ್ನು “ಹನಿ ಮಶ್ರೂಮ್” (Honey Mushrooms) ಎಂದು ಕರೆಯಲಾಗುತ್ತದೆ. ಈ ಶಿಲೀಂಧ್ರಗಳನ್ನು ತಿನ್ನಬಹುದಾಗಿದ್ದರೂ, ಸ್ವಲ್ಪ ಕಹಿಯಾಗಿರುತ್ತವೆ ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುತ್ತಾರೆ.
ಪರಿಸರದ ಮೇಲೆ ಇದರ ಪ್ರಭಾವ
ಅರ್ಮಿಲೇರಿಯಾ ಒಸ್ಟೋಯೇ ಅರಣ್ಯಗಳಲ್ಲಿ ಸಾವಿನಂಚಿನಲ್ಲಿರುವ ಮರಗಳನ್ನು ಕೊಳೆಸುವ ಮೂಲಕ ಪೋಷಕಾಂಶಗಳನ್ನು ಭೂಮಿಗೆ ಪುನರ್ಬಳಕೆ ಮಾಡುತ್ತದೆ. ಆದರೆ, ಇದು ಜೀವಂತ ಮರಗಳ ಬೇರುಗಳಿಗೆ ಸೋಂಕನ್ನು ಹರಡಿದರೆ, ಅವುಗಳನ್ನು ಸಾಯುವಂತೆ ಮಾಡುತ್ತದೆ. ಈ ಶಿಲೀಂಧ್ರದ ಆಕ್ರಮಣದಿಂದ ಕಳೆದ ಕೆಲವು ದಶಕಗಳಲ್ಲಿ ಹಲವಾರು ಅರಣ್ಯ ಪ್ರದೇಶಗಳು ಸಂಪೂರ್ಣವಾಗಿ ನಾಶವಾಗಿವೆ.
ವೈಜ್ಞಾನಿಕ ಅಧ್ಯಯನಗಳು ಮತ್ತು ಮಹತ್ವ
ವಿಜ್ಞಾನಿಗಳು ಈ ಮಹಾಕಾಯ ಶಿಲೀಂಧ್ರದ ನಮ್ಯತೆ, ಬೆಳವಣಿಗೆ ಮಾದರಿಗಳು, ಮತ್ತು ಪ್ರಾಕೃತಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯದ ಕುರಿತಂತೆ ಅಧ್ಯಯನ ಮಾಡುತ್ತಿದ್ದಾರೆ. ಅದರ ಸಾವಿರಾರು ವರ್ಷಗಳ ಕಾಲ ಬದುಕುಳಿದಿರುವ ರಹಸ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಭೂಮಿಯ ಮೇಲಿನ ಅದ್ಭುತ
ಹ್ಯುಮೊಂಗಸ್ ಶಿಲೀಂಧ್ರದ ಮಹತ್ವದ ಆವಿಷ್ಕಾರವು ಜೀವನ ಹೇಗೆ ವಿಕಸನಗೊಳ್ಳುತ್ತಿದೆ ಮತ್ತು ಶತಮಾನಗಳಿಂದ ಹೇಗೆ ಮುಂದುವರಿಯುತ್ತಾ ಬಂದಿದೆ ಎಂಬುದರ ಬಗ್ಗೆ ಇನ್ನಷ್ಟು ಆಸಕ್ತಿ ಹುಟ್ಟಿಸುತ್ತಿದೆ. ವಿಜ್ಞಾನಿಗಳು ಈ ಶಿಲೀಂಧ್ರದ ಕುರಿತು ಅಧ್ಯಯನ ಮಾಡಿ, ಇದು ಮರಗಳ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ? ಜೈವಿಕ ಸಮತೋಲನದಲ್ಲಿ ಇದರ ಪ್ರಭಾವ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಅದರ ಉಪಯೋಗಗಳೇನು ಎಂಬುದನ್ನೆಲ್ಲಾ ಪತ್ತೆಹಚ್ಚುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹ್ಯುಮೊಂಗಸ್ ಶಿಲೀಂಧ್ರವು ಜನರ ಕಣ್ಣಿಗೆ ಕಾಣದೇ ಇರಬಹುದು, ಆದರೆ ಇದು ನೈಸರ್ಗಿಕ ವೈವಿಧ್ಯದ ಅಪೂರ್ವ ಉದಾಹರಣೆಯಾಗಿದೆ. ಈ ದೈತ್ಯ ಜೀವಿಯು ಎಷ್ಟೋ ಅದ್ಭುತಗಳು ನಮ್ಮ ಕಾಲಡಿಯಲ್ಲೇ ಇವೆ ಎಂದು ಸಾರಿ ಹೇಳುತ್ತಿದೆ.