
ದೆಹಲಿ: ಭಾರತವು ಹಸಿರು ಭವಿಷ್ಯದತ್ತ ಮುನ್ನಡೆಯುತ್ತಿರುವಾಗ, ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆ (PMSGMBY) ಇಂದು ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಪ್ರಾರಂಭಿಸಿದ ಈ ಕ್ರಾಂತಿಕಾರಿ ಯೋಜನೆಯು ದೇಶದ ಲಕ್ಷಾಂತರ ಮನೆಗಳಿಗೆ ಸುಲಭ ದರದಲ್ಲಿ ಸೌರಶಕ್ತಿ ಒದಗಿಸಲು ಸಹಾಯ ಮಾಡುತ್ತಿದೆ. ಮಾರ್ಚ್ 2027ರೊಳಗೆ ಒಂದು ಕೋಟಿಗಿಂತ ಹೆಚ್ಚು ಮನೆಗಳಿಗೆ ಮೇಲ್ಚಾವಣಿ ಸೌರಶಕ್ತಿಯ ಮೂಲಕ ಉಚಿತ ವಿದ್ಯುತ್ ನೀಡುವ ಪಣ ತೊಟ್ಟಿದೆ.


ಒಂದು ವರ್ಷದ ಸಾಧನೆಗಳು ಮತ್ತು ಪ್ರಗತಿ

ಜನವರಿ 27, 2025ರವರೆಗಿನ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಈ ಯೋಜನೆಯು ಈಗಾಗಲೇ 8.46 ಲಕ್ಷ ಮನೆಗಳಿಗೆ ಲಾಭವನ್ನು ಒದಗಿಸಿದೆ. ಸೌರಶಕ್ತಿಯ ಬಳಕೆ ಹೆಚ್ಚಾಗುತ್ತಿದ್ದು ಮಾಸಿಕ ರೂಫ್ಟಾಪ್ ಸೌರ ಸ್ಥಾಪನೆಯು ಹೆಚ್ಚುತ್ತಿದೆ. ಈ ಯೋಜನೆ ಜಾರಿಗೆ ಬಂದ ನಂತರ ಪ್ರತೀ ತಿಂಗಳಿಗೆ 70,000 ಮನೆಗಳು ಸೌರಶಕ್ತಿಯನ್ನು ಅಳವಡಿಸುತ್ತಿವೆ. ಈ ಯೋಜನೆಯನ್ನು ಪ್ರಾರಂಭಿಸುವುದಕ್ಕೂ ಮುನ್ನ ಕಂಡುಬಂದ ಸ್ಥಾಪನಾ ದರಗಳಿಗಿಂತ ಬಹಳ ಅಧಿಕವಾಗಿದೆ.
ಎಲ್ಲರಿಗೂ ಸೌರಶಕ್ತಿಯ ಪ್ರಯೋಜನವಾಗಬೇಕೆಂಬ ನಿಟ್ಟಿನಲ್ಲಿ ಸರಕಾರವು 40% ಸಬ್ಸಿಡಿಯನ್ನು ನೀಡಿದ್ದು, ಅನೇಕ ಮನೆಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುವಂತೆ ಮಾಡುತ್ತಿದೆ. ಇದುವರೆಗೆ,₹4,308.66 ಕೋಟಿ ರೂಪಾಯಿ ಕೇಂದ್ರ ಆರ್ಥಿಕ ಸಹಾಯ (CFA) ವಾಗಿ 5.54 ಲಕ್ಷ ಗ್ರಾಹಕರಿಗೆ ವಿತರಿಸಲಾಗಿದೆ, ಹಾಗೂ ಪ್ರತಿ ಮನೆಗೆ ಸರಾಸರಿ ₹77,800 ಸಬ್ಸಿಡಿಯನ್ನು ನೀಡಲಾಗಿದೆ.
ಪಿಎಂ ಸೂರ್ಯಾ ಘರ್ ಯೋಜನೆಯಡಿಯಲ್ಲಿ ಹೆಚ್ಚು ಲಾಭ ಪಡೆಯುತ್ತಿರುವ ರಾಜ್ಯಗಳು

ಪಿಎಂ ಸೂರ್ಯಾ ಘರ್ ಯೋಜನೆಯಡಿ ರಾಷ್ಟ್ರಾದ್ಯಂತ ರೂಫ್ ಟಾಪ್ ಸೌರ ಪ್ಯಾನಲ್‌ಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುತ್ತಿದ್ದು, ಅಂಕಿ ಅಂಶಗಳ ಪ್ರಕಾರ;
- ಗುಜರಾತ್: ಸುಮಾರು 2.9 ಲಕ್ಷ ರೂಫ್ ಟಾಪ್ ಸೌರ ಪ್ಯಾನಲ್‌ಗಳನ್ನು ಅಳವಡಿಸಿ ಮುನ್ನಡೆದಲ್ಲಿದೆ. ಗುಜರಾತ್ ಈ ಯೋಜನೆಯ ಒಟ್ಟು 46% ಉಪಯೋಗವನ್ನು ಪಡೆದುಕೊಂಡಿದೆ.
- ಮಹಾರಾಷ್ಟ್ರ: 1.3 ಲಕ್ಷ ಸೌರ ಪ್ಯಾನಲ್‌ಗಳನ್ನು ಅಳವಡಿಸಿಕೊಂಡು ದ್ವಿತೀಯ ಸ್ಥಾನದಲ್ಲಿದೆ.
- ಉತ್ತರ ಪ್ರದೇಶ: 53,423 ಮನೆಗಳು ಈ ಯೋಜನೆಯ ಲಾಭ ಪಡೆದುಕೊಂಡು ತೃತೀಯ ಸ್ಥಾನದಲ್ಲಿದೆ.
ಯೋಜನೆಯ ಪ್ರಮುಖ ಲಾಭಗಳು
ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆ ಭಾರತೀಯ ಮನೆಗಳಿಗೆ ಹಾಗೂ ದೇಶಕ್ಕೆ ಹಲವು ಲಾಭಗಳನ್ನು ಒದಗಿಸುತ್ತದೆ:
- ಮನೆಗಳಿಗೆ ಉಚಿತ ವಿದ್ಯುತ್: ರೂಫ್ ಟಾಪ್ ಸೌರ ಪ್ಯಾನೆಲ್‌ಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಪಡೆಯಬಹುದು, ಇದರಿಂದ ವಿದ್ಯುತ್ ಖರ್ಚು ಬಹಳ ಕಡಿಮೆಯಾಗುತ್ತದೆ.
- ಸರಕಾರದ ವಿದ್ಯುತ್ ವೆಚ್ಚ ಕಡಿಮೆ: ಈ ಯೋಜನೆಯಿಂದ ಸರಕಾರಕ್ಕೆ ವಾರ್ಷಿಕ ₹75,000 ಕೋಟಿ ಉಳಿತಾಯವಾಗುತ್ತದೆ. ಇದರಿಂದ ಪಾರಂಪರಿಕ ವಿದ್ಯುತ್ ಮೂಲಗಳ ಅವಲಂಬನೆ ಕಡಿಮೆಯಾಗುತ್ತದೆ.
- ಪುನರ್ಬಳಕೆ ಮಾಡಬಹುದಾದ ಶಕ್ತಿಯ ಪ್ರಚಾರ: ಈ ಯೋಜನೆಯು ಸೌರಶಕ್ತಿಯ ವ್ಯಾಪಕ ಸ್ವೀಕಾರಕ್ಕೆ ಪ್ರೋತ್ಸಾಹ ನೀಡುತ್ತದೆ. ಇದರಿಂದ ಹಸಿರು ಶಕ್ತಿ ಬಳಕೆಗೆ ಪ್ರೇರೇಪಿಸಿದಂತಾಗುತ್ತದೆ.
- ಕಡಿಮೆ ಇಂಗಾಲದ ಉತ್ಪತ್ತಿ: ಸೌರಶಕ್ತಿಯ ಬಳಕೆ ಹೆಚ್ಚುವುದರಿಂದ ಇಂಗಾಲದ ಉತ್ಪತ್ತಿ ಕಡಿಮೆಯಾಗುತ್ತದೆ ಮತ್ತು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸಹಾಯವಾಗುತ್ತದೆ.
- ಮನೆಗಳಲ್ಲಿ ಉಳಿತಾಯ ಮತ್ತು ಆದಾಯದ ಅವಕಾಶ: ಸೌರಶಕ್ತಿ ಪ್ಯಾನಲ್‌ಗಳನ್ನು ಅಳವಡಿಸಿದ ಹಲವಾರು ಮನೆಗಳಲ್ಲಿ ಯಾವುದೇ ವಿದ್ಯುತ್ ಬಿಲ್ ಬರುತ್ತಿಲ್ಲ. ಜೊತೆಗೆ, ಮನೆಮಾಲೀಕರು ಅಧಿಕ ಶಕ್ತಿಯನ್ನು DISCOM ಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು. 3-ಕಿಲೋ ವ್ಯಾಟ್ ಸೌರ ವ್ಯವಸ್ಥೆಯಲ್ಲಿ ಸರಾಸರಿ ತಿಂಗಳಿಗೆ 300 ಯೂನಿಟ್ ಉತ್ಪಾದಿಸಬಹುದು. ಇದರಿಂದ ಸ್ವಾವಲಂಬಿ ಜೀವನವನ್ನು ನಡೆಸುವುದರ ಜೊತೆಗೆ ಆದಾಯವನ್ನೂ ಗಳಿಸಬಹುದು.
2027ರ ವೇಳೆಗೆ ಒಂದು ಕೋಟಿ ಸೌರಶಕ್ತಿಯ ಮನೆಗಳ ಗುರಿಯನ್ನು ಇಟ್ಟುಕೊಂಡಿರುವ ಈ ಯೋಜನೆಯು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದರ ಜೊತೆಗೆ ಅದನ್ನು ಹಸಿರು ಮತ್ತು ಶಾಶ್ವತ ಭವಿಷ್ಯದತ್ತ ಕೊಂಡೊಯ್ಯುತ್ತಿರುವುದಂತೂ ಖಚಿತ. ಈ ಕ್ರಾಂತಿಕಾರಿ ಯೋಜನೆಯ ಮೊದಲ ವಾರ್ಷಿಕೋತ್ಸವವು, ಭಾರತದ ಹಸಿರು ಶಕ್ತಿಯ ದೃಢ ಸಂಕಲ್ಪಕ್ಕೆ ಸಾಕ್ಷಿ. ಜನ ಸಾಮಾನ್ಯರ ವ್ಯಾಪಕ ಸ್ವೀಕಾರದೊಂದಿಗೆ, ಸೌರಶಕ್ತಿ ಕೋಟಿ ಮಂದಿಯ ಮನೆಗಳನ್ನು ಬೆಳಗಿಸುವ ಮೂಲಕ, ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತಿದೆ.