ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ

ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ

ನವದೆಹಲಿ: ಆಂತರಿಕ ಉಗ್ರಗಾಮಿಗಳನ್ನು ಎದುರಿಸಲು ಭಾರತ ಸರಕಾರ ಕೈಗೊಂಡ ಸಂಘಟಿತ ಪ್ರಯತ್ನಗಳು ಗಮನಾರ್ಹ ಫಲವನ್ನು ನೀಡಿವೆ. ಉಗ್ರಗಾಮಿ ಸಂಘಟನೆಗಳ ಪ್ರಾದೇಶಿಕ ಪ್ರಭಾವ ಮತ್ತು ಹಿಂಸಾಚಾರದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 2015 ರಲ್ಲಿ ‘ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ’ ಅನುಷ್ಠಾನಕ್ಕೆ ಬಂದ ಪರಿಣಾಮ ಆಂತರಿಕ ಉಗ್ರ ಸಂಘಟನೆಗಳ ಹಿಂಸಾಚಾರವು ಗಣನೀಯವಾಗಿ ಕಡಿಮೆಯಾಗಿದೆ.

ಇಳಿಮುಖವಾದ ಆಂತರಿಕ ಉಗ್ರಗಾಮಿ ಸಂಘಟನೆಗಳ ಪ್ರಭಾವ ಮತ್ತು ಹಿಂಸಾಚಾರ

2015 ರಲ್ಲಿ, ಈ ನೀತಿ ಅನುಷ್ಠಾನಕ್ಕೆ ಬರುವುದಕ್ಕೂ ಮುನ್ನ, 126 ಉಗ್ರಗಾಮಿ-ಪೀಡಿತ ಜಿಲ್ಲೆಗಳಿದ್ದವು. 2024 ರ ವೇಳೆಗೆ ಉಗ್ರಗಾಮಿ ಚಟುವಟಿಕೆಗಳು ಕುಸಿದು, ಈಗ ಕೇವಲ 38 ಜಿಲ್ಲೆಗಳು ಮಾತ್ರ ಉಳಿದುಕೊಂಡಿವೆ. ಭಾರತವು ಉಗ್ರವಾದ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ. ಹಿಂಸಾಚಾರ ಕೃತ್ಯಗಳ ಸಂಖ್ಯೆಯು 81% ಇಳಿಕೆ ಯಾಗಿದ್ದು, 2010 ರಲ್ಲಿ ದಾಖಲಾದ 1,936 ಪ್ರಕರಣಗಳಿಗೆ ಹೋಲಿಸಿದರೆ, 2024 ರಲ್ಲಿ 374 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳಲ್ಲಿನ ಸಾವುನೋವುಗಳ ಪ್ರಮಾಣವೂ 85% ರಷ್ಟು ಕಡಿಮೆಯಾಗಿದೆ.

ಹೆಚ್ಚು ಪೀಡಿತ ರಾಜ್ಯಗಳಲ್ಲಿ ಒಂದಾದ ಛತ್ತೀಸ್‌ಗಢದಲ್ಲಿ, ಉಗ್ರಗಾಮಿ ಸಂಬಂಧಿತ ಹಿಂಸಾಚಾರವು 2010 ರಿಂದ 47% ರಷ್ಟು ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ಸಂಭವಿಸಿದ ಸಾವುಗಳು 64% ರಷ್ಟು ಕಡಿಮೆಯಾಗಿವೆ.

ಆಂತರಿಕ ಉಗ್ರಗಾಮಿ ನಿಗ್ರಹಕ್ಕೆ ಸಮಗ್ರ ಕ್ರಮಗಳು

ಆಂತರಿಕ ಉಗ್ರಗಾಮಿ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಭದ್ರತಾ ಕ್ರಮಗಳು, ಮೂಲಸೌಕರ್ಯ ಅಭಿವೃದ್ಧಿಯತ್ತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದೆ.

ಭದ್ರತಾ ಕ್ರಮಗಳು:

  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPF) ಗಳ ನಿಯೋಜನೆ
  • ತರಬೇತಿ ಮತ್ತು ಆಧುನಿಕ ಸಾಧನಗಳ ಪೂರೈಕೆ ಮೂಲಕ ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣ
  • ಛತ್ತೀಸ್‌ಗಢದಲ್ಲಿನ 147 ಪೊಲೀಸ್ ಠಾಣೆಗಳು ಸೇರಿದಂತೆ, 702 ಬಲವರ್ಧಿತ ಪೊಲೀಸ್ ಠಾಣೆಗಳ (FPS) ನಿರ್ಮಾಣ
  • ವಿಶೇಷ ಪಡೆಗಳು ಮತ್ತು ಗುಪ್ತಚರ ಘಟಕಗಳ ಬಲವರ್ಧನೆ
  • ಭದ್ರತೆ ಸಂಬಂಧಿತ ವೆಚ್ಚ (SRE) ಯೋಜನೆಯಡಿ ಶರಣಾದ ಉಗ್ರಗಾಮಿಗಳ ಸುದಾರಣೆ.

ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಾರ್ಯಕ್ರಮಗಳು:

  • ಉಗ್ರಗಾಮಿ – ಪೀಡಿತ ಪ್ರದೇಶಗಳಲ್ಲಿ 4,046 ಕಿ.ಮೀ.ಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸುವ ಮೂಲಕ ರಸ್ತೆ ಜಾಲಗಳ ವಿಸ್ತರಣೆ ಮಾಡಲಾಗಿದೆ.
  • 1,333 ಮೊಬೈಲ್ ಟವರ್‌ಗಳನ್ನು ನಿಯೋಜಿಸುವ ಮೂಲಕ ದೂರವಾಣಿ ಸಂಪರ್ಕದ ಸುಧಾರಣೆ ಮಾಡಲಾಗಿದೆ.
  • ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡು, 1,214 ಅಂಚೆ ಕಚೇರಿಗಳು, 297 ಬ್ಯಾಂಕ್ ಶಾಖೆಗಳು ಮತ್ತು 268 ಎಟಿಎಂಗಳನ್ನು ತೆರೆಯಲಾಗಿದೆ.
  • 09 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) ಮತ್ತು 14 ಕೌಶಲ್ಯ ಅಭಿವೃದ್ಧಿ ಕೇಂದ್ರ (ಎಸ್‌ಡಿಸಿ) ಗಳನ್ನು ತೆರೆದು, ಕೌಶಲ್ಯ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ.
  • ಬುಡಕಟ್ಟು ಸಮುದಾಯಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ 45 ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್‌ಎಸ್) ಸ್ಥಾಪಿಸಲಾಗಿದೆ.

ಆರ್ಥಿಕ ನೆರವು ಮತ್ತು ಭವಿಷ್ಯದ ಯೋಜನೆಗಳು

  • ಕಳೆದ ಐದು ವರ್ಷಗಳಲ್ಲಿ ಸರ್ಕಾರವು ನಕ್ಸಲ್ ಪೀಡಿತ ರಾಜ್ಯಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ₹6,000 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ.
  • ಭದ್ರತೆ ಸಂಬಂಧಿತ ವೆಚ್ಚ (SRE) ಯೋಜನೆಯಡಿ ₹1,925.83 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
  • ವಿಶೇಷ ಕೇಂದ್ರ ನೆರವು (SCA) ಯೋಜನೆಯಡಿ ₹2,384.17 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
  • ಇದಲ್ಲದೆ, ಹೆಲಿಕಾಪ್ಟರ್‌ಗಳು ಮತ್ತು ಭದ್ರತಾ ಶಿಬಿರಗಳು ಸೇರಿದಂತೆ, ಭದ್ರತೆಗೆ ಸಂಬಂಧಿಸಿದ ಮೂಲಸೌಕರ್ಯಕ್ಕಾಗಿ ₹654.84 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
  • ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೀಡಿತ ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಸರಕಾರ ಬದ್ಧವಾಗಿದೆ.

ನಕ್ಸಲ್ ಮುಕ್ತ ಭಾರತಕ್ಕೆ ಒಂದು ಹಾದಿ

ಕಳೆದ 10 ವರ್ಷಗಳಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯೊಂದಿಗೆ, ಮಾರ್ಚ್ 31, 2026 ರೊಳಗೆ ಆಂತರಿಕ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿದೆ ಎಂದು ಭಾರತ ಸರಕಾರ ಮತ್ತೊಮ್ಮೆ ಹೇಳಿದೆ. ಉಗ್ರಗಾಮಿ – ಪೀಡಿತ ಪ್ರದೇಶಗಳಲ್ಲಿನ ನಾಗರಿಕರು ಉಗ್ರಗಾಮಿ ಹಿಂಸಾಚಾರದಿಂದ ಬಳಲುತ್ತಿಲ್ಲವೆಂಬುದನ್ನು ಎಂದು ಖಚಿತಪಡಿಸಿಕೊಂಡು, ಅಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಲಾಗಿದೆ.

ಭದ್ರತಾ ಕಾರ್ಯಾಚರಣೆಗಳು ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಏಕಕಾಲಕ್ಕೆ ಜೊತೆಯಾಗಿ ಅನ್ವಯಿಸಿರುವ ಭಾರತ ಸರಕಾರದ ಪೂರ್ವಭಾವಿ ವಿಧಾನವು ಉಗ್ರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕಿದೆ ಎಂಬುದು ಸ್ಪಷ್ಟವಾಗಿದೆ. ಉಗ್ರಗಾಮಿ – ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ಯಶಸ್ವಿಯಾಗಿ ಸಾಗುತ್ತಿರುವ ನಮ್ಮ ದೇಶವು, ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳು ಮತ್ತೊಮ್ಮೆ ನಡೆಯದಂತೆ ಮಾಡಲು ಸೂಕ್ತ ಮುಂಜಾಗೃತಾ ಕ್ರಮಗಳನ್ನೂ ಯೋಚಿಸಿದಾಗ, ಈ ಪರಿಶ್ರಮವು ಅರ್ಥಪೂರ್ಣವಾಗುತ್ತದೆ.

ರಾಷ್ಟ್ರೀಯ