ಐಎಎಫ್ ಏರೋ ಇಂಡಿಯಾ 2025 ನಲ್ಲಿ ‘ನವಾಚಾರ್ ಉತ್ತ್ಕೃಷ್ಠಂ ಭವಿಷ್ಯಂ’ ವಿಚಾರಗೋಷ್ಠಿ ಆಯೋಜನೆ

ಐಎಎಫ್ ಏರೋ ಇಂಡಿಯಾ 2025 ನಲ್ಲಿ ‘ನವಾಚಾರ್ ಉತ್ತ್ಕೃಷ್ಠಂ ಭವಿಷ್ಯಂ’ ವಿಚಾರಗೋಷ್ಠಿ ಆಯೋಜನೆ

ಬೆಂಗಳೂರು : ಭಾರತೀಯ ವಾಯುಪಡೆ (ಐಎಎಫ್) ಸ್ವದೇಶೀ ರಕ್ಷಣಾ ಅಭಿವೃದ್ಧಿಯ ಮಹತ್ವವನ್ನು ಪ್ರತಿಪಾದಿಸುವ ‘ನವಾಚಾರ್ ಉತ್ಕೃಷ್ಠಂ ಭವಿಷ್ಯಂ’ (ಆವಿಷ್ಕಾರವೇ ಉತ್ತಮ ಭವಿಷ್ಯಕ್ಕೆ ಹಾದಿ) ಎಂಬ ಶೀರ್ಷಿಕೆಯ ಅಡಿಯಲ್ಲಿ ಏರೋ ಇಂಡಿಯಾ 2025 ರಲ್ಲಿ ಮಹತ್ವದ ವಿಚಾರಗೋಷ್ಠಿಯನ್ನು ಆಯೋಜಿಸುತ್ತಿದೆ. ಈ ವಿಚಾರಗೋಷ್ಠಿ ಬೆಂಗಳೂರಿನ ಯಲಹಂಕ ವಾಯುನೆಲೆಯ ಹಾಲ್ ನಂ. 1 ರಲ್ಲಿ, ಮಧ್ಯಾಹ್ನ 2:00 ಗಂಟೆಯಿಂದ 4:30 ರವರೆಗೆ ನಡೆಯಲಿದೆ.

ಗೌರವಾನ್ವಿತ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮುಖ್ಯ ಅತಿಥಿಗಳಾಗಿ ಹಾಜರಾಗಲಿದ್ದು, ವಾಯುಪಡೆಯ ಮುಖ್ಯಸ್ಥರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸೇನಾಧಿಕಾರಿಗಳು, ಸರಕಾರದ ಪ್ರತಿನಿಧಿಗಳು, ಕೈಗಾರಿಕಾ ಕ್ಷೇತ್ರದ ಮುಂದಾಳುಗಳು, ಗುಡಿಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಸ್ಟಾರ್ಟ್-ಅಪ್‌ಗಳು, ನವೋದ್ಯಮಿಗಳು ಹಾಗೂ ಶೈಕ್ಷಣಿಕ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ.

ಆವಿಷ್ಕಾರ ಮತ್ತು ಸ್ವಾವಲಂಬನೆಗೆ ಒತ್ತು

ಈ ವಿಚಾರಗೋಷ್ಠಿಯು ಭಾರತೀಯ ಸರ್ಕಾರದ ಆತ್ಮನಿರ್ಭರತೆ ದೃಷ್ಟಿಕೋನಕ್ಕೆ ಅನುಗುಣವಾಗಿ, ಭಾರತೀಯ ವಾಯುಪಡೆಯ ಕೈಗಾರಿಕಾ ಪಾಲುದಾರರೊಂದಿಗೆ ತಂತ್ರಜ್ಞಾನ ಅಭಿವೃದ್ಧಿ ಕಾರ್ಯವನ್ನು ಹೆಚ್ಚು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ವಾಯುಪಡೆ ಈಗಾಗಲೇ ಪೂರೈಕೆ ಭಾಗಗಳ ಸ್ವದೇಶೀಕರಣ ಮತ್ತು ಸಾಧನಗಳ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸಿದೆ. ಈಗ, ಮುಂದಿನ ತಂತ್ರಜ್ಞಾನ, ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ಬಾಹ್ಯಾಕಾಶ ಆಧಾರಿತ ಪರಿಹಾರಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

ಪ್ರಮುಖ ವಿಮಾನಯಾನ ಮತ್ತು ರಕ್ಷಣಾ ಪ್ರದರ್ಶನವಾಗಿ ಏರೋ ಇಂಡಿಯಾ, ತಂತ್ರಜ್ಞಾನ ಮತ್ತು ಕೈಗಾರಿಕಾ ಸಹಭಾಗಿತ್ವದ ಪರಿಪೂರ್ಣ ವೇದಿಕೆಯಾಗಿದ್ದು, ಸ್ವದೇಶೀ ರಕ್ಷಣಾ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಐಎಎಫ್ ಪ್ರಮುಖ ಪಾತ್ರವಹಿಸುತ್ತಿದೆ.

ಪ್ರಮುಖ ಘೋಷಣೆಗಳು ಮತ್ತು ಪ್ರಾರಂಭಗಳು

ವಿಚಾರಗೋಷ್ಠಿಯ ಸಮಯದಲ್ಲಿ ಹಲವಾರು ಪ್ರಮುಖ ಪ್ರಕಟಣೆಗಳು ಮತ್ತು ಯೋಜನೆಗಳು ಘೋಷಣೆಯಾಗಲಿವೆ:

  • ಐಎಎಫ್ ಸಂಗ್ರಹ (ಸಾಮರ್ಥ್ಯ ಮಾರ್ಗದರ್ಶಿ) : ಭಾರತೀಯ ವಾಯುಪಡೆಯ ಮುಂದಿನ ಅಗತ್ಯಗಳ ಬಗ್ಗೆ ಮಧ್ಯಮ ಪ್ರಮಾಣದ ಕೈಗಾರಿಕೆಗಳು  ಸ್ಟಾರ್ಟ್-ಅಪ್‌ಗಳು ಮತ್ತು ನೂತನ ಉದ್ಯಮಿಗಳಿಗೆ ಮಾರ್ಗದರ್ಶಿ ಪುಸ್ತಕ.‌

  • ಮೆಹರ್ ಬಾಬಾ-III ಸ್ಪರ್ಧೆ (MBC-III) ಉದ್ಘಾಟನೆ : ಸಮೂಹ ಡ್ರೋನ್ ತಂತ್ರಜ್ಞಾನವನ್ನು ಪ್ರದರ್ಶಿಸಿದ MBC-II ಯಶಸ್ಸಿನ ನಂತರ, ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS) ಗೆ ಹೋಲುವ ಮಾನವರಹಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡಿರುವ MBC-III ‘ಸಹಕಾರಿ ಡ್ರೋನ್-ಆಧಾರಿತ ಕಣ್ಗಾವಲು ರಾಡರ್‌’ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.

  • ಮೆಹರ್ ಬಾಬಾ-II ಸ್ಪರ್ಧೆಯ ವಿಜೇತರ ಘೋಷಣೆ : 2022 ರಲ್ಲಿ ಪ್ರಾರಂಭಗೊಂಡ ಸ್ಪರ್ಧೆಯಲ್ಲಿ ಅತ್ಯುತ್ತಮ ಡ್ರೋನ್ ತಂತ್ರಜ್ಞಾನ ಪರಿಹಾರಗಳನ್ನು ಆವಿಷ್ಕಾರ ಮಾಡಿದವರನ್ನು ಸನ್ಮಾನಿಸಲಾಗುವುದು.

  • ‘ವಾಯು ವಿತ್ತ್’ ಡಿಜಿಟಲ್ ಪೋರ್ಟಲ್ ಬಿಡುಗಡೆ: ಐಎಎಫ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎ‌ಎಲ್) ನಡುವಿನ ಆರ್ಡರ್ ಸಂಸ್ಕರಣೆ, ಪ್ರಮಾಣೀಕರಣ ಮತ್ತು ಪಾವತಿಗಳನ್ನು ಸುಗಮಗೊಳಿಸುವುದಕ್ಕಾಗಿ ಈ  ಹೊಸ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಲಿದ್ದು, ಇದು ಡಿಜಿಟಲೀಕರಣ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಸಹಾಯಕವಾಗಲಿದೆ.

ಮಾನವ-ತಂತ್ರಜ್ಞಾದ ಜೊತೆಗಾರಿಕೆ – ಪರಿಕಲ್ಪನೆಯಿಂದ ಗುರಿವರೆಗೆ” ಈ ವಿಷಯದ ಕುರಿತು ಚರ್ಚೆ

ಮಾನವ -ತಂತ್ರಜ್ಞಾದ ಜೊತೆಗಾರಿಕೆ ಎಂದರೇನು?

ಇದು ಮಾನವ ಚಾಲಿತ ವಿಮಾನಗಳು (ಫೈಟರ್ ಜೆಟ್, ಹೆಲಿಕಾಪ್ಟರ್ ಮುಂತಾದವು) ಮತ್ತು ಡ್ರೋನ್‌ಗಳ (ಸ್ವಯಂ ಚಾಲಿತ ಮೆಶಿನ್‌ಗಳು) ಒಂದು ಜೋಡಣೆ. ಇದರಿಂದ ಸೇನಾ ಕಾರ್ಯಾಚರಣೆಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ.

ಇದರಿಂದ, ಅನೇಕ ಲಾಭಗಳಿವೆ :

  • ಪೈಲಟ್‌ಗಳ ಭದ್ರತೆ: ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಡ್ರೋನ್‌ಗಳನ್ನು ಬಳಸುವುದರಿಂದ, ಪೈಲಟ್‌ಗಳಿಗೆ ಸಂಭವಿಸುವ ಅಪಾಯ ಕಡಿಮೆಯಾಗುತ್ತದೆ.
  • ಅತ್ಯಾಧುನಿಕ ಕಣ್ಗಾವಲು: ಮಾನವ ಚಾಲಿತ ವಿಮಾನಗಳು ಮತ್ತು ಡ್ರೋನ್‌ಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ, ಶತ್ರುಗಳ ಚಲನವಲನಗಳನ್ನು ತ್ವರಿತವಾಗಿ ಪತ್ತೆ ಹಚ್ಚಬಹುದು.
  • ಸೇನಾ ಸಾಮರ್ಥ್ಯ ಹೆಚ್ಚುವುದು: ಡ್ರೋನ್‌ಗಳು ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯ ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನದ ಬಲವನ್ನು ನೀಡುತ್ತವೆ.

ಭಾರತ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು, ಮಾನವ ಚಾಲಿತ ವಿಮಾನ ಮತ್ತು ಡ್ರೋನ್‌ಗಳ ಸಹಯೋಗದ ಮೂಲಕ ಸೇನಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಭಾರತದ ಭದ್ರತಾ ಅವಶ್ಯಕತೆಗಳಿಗೆ ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಈ ಚರ್ಚೆಯ ಮುಖ್ಯ ಉದ್ದೇಶ.  ವೈಮಾನಿಕ ಕ್ಷೇತ್ರದ ತಜ್ಞರು, ವಿಜ್ಞಾನಿಗಳು, ಕೈಗಾರಿಕಾ ವಲಯದ ಮುಖ್ಯಸ್ಥರು, ಪ್ರಮಾಣೀಕರಣ ಸಂಸ್ಥೆಗಳು ಹಾಗೂ ರಕ್ಷಣಾ ತಜ್ಞರು ಈ ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಾರೆ.

ಭಾರತೀಯ ರಕ್ಷಣಾ ಕ್ಷೇತ್ರವನ್ನು ಬಲಪಡಿಸುವತ್ತ ಮೊದಲ ಹೆಜ್ಜೆ

ಈ ಸಮ್ಮೇಳನವು ಭಾರತೀಯ ವಾಯುಪಡೆಯ ಪ್ರಮುಖ ಪ್ರಯತ್ನವಾಗಿದ್ದು, ರಕ್ಷಣಾ ಕ್ಷೇತ್ರ, ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಇಟ್ಟುಕೊಂಡಿದೆ. ಇದು ರಕ್ಷಣಾ ತಂತ್ರಜ್ಞಾನಗಳಲ್ಲಿ ನವೀನತೆ ಮತ್ತು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುತ್ತದೆ. ಏರೋ ಇಂಡಿಯಾ 2025 – ಕಾರ್ಯಕ್ರಮದ ಅಂಗವಾಗಿ ನಡೆಯುವ ಈ ಕಾರ್ಯಕ್ರಮವು ಭಾರತವನ್ನು ಆತ್ಮನಿರ್ಭರ ಹಾಗೂ ವೈಮಾನಿಕ ತಂತ್ರಜ್ಞಾನದಲ್ಲಿ ಮುಂದಾಳುವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದರ ಫಲವಾಗಿ ಭವಿಷ್ಯದಲ್ಲಿ ಮತ್ತಷ್ಟು ಭದ್ರತೆ ಮತ್ತು ಸ್ವಾಯತ್ತತೆಯನ್ನು ನಿರೀಕ್ಷಿಸಬಹುದು.

ರಾಷ್ಟ್ರೀಯ