
ಕಾರವಾರ : ಜನಸಂಚಾರ ಹೆಚ್ಚಾಗಿ ಇರದ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆಯಾದ ಘಟನೆ ಅಂಕೋಲದ ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ನಡೆದಿದೆ.

ಮಂಗಳವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ನ ಲಾಕರ್ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ 1.15 ಕೋಟಿ ಹಣ ಇರುವುದು ಕಂಡು ಬಂದಿದೆ.
ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸಿದ್ದು, ಮಡಿಕೇರಿ ಆರ್ಟಿಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
