
ಮಂಗಳೂರು: ಕರಾವಳಿಯು ಕ್ರಿಸ್ಮಸ್ ಸಂಭ್ರಮಕ್ಕೆ ಪೂರ್ತಿ ಸಜ್ಜಾಗಿದೆ. ಇಂದು (ಡಿ.24) ರಾತ್ರಿ ಕ್ರಿಸ್ಮಸ್ ಸಂಭ್ರಮಾಚರಣೆಗೆ ಚಾಲನೆ ಸಿಗಲಿದೆ. ಬೆತ್ಲೆಹೇಮ್ ನಗರದಲ್ಲಿ ನಡುರಾತ್ರಿಯ ವೇಳೆ ಕ್ರಿಸ್ತರ ಜನನವಾದ ಸನ್ನಿವೇಶವನ್ನು ಸ್ಮರಿಸಿ ರಾತ್ರಿ ಜಾಗತಿಕವಾಗಿ ಕ್ರಿಸ್ಮಸ್ ಜಾಗರಣೆ ನಡೆಯಲಿದೆ.

ಸಂಜೆ 7 ಗಂಟೆಯಿಂದ ಚರ್ಚ್‌ಗಳಲ್ಲಿ ಕ್ಯಾರೋಲ್ ಗಾಯನ, ವಿಶೇಷ ಬಲಿಪೂಜೆ, ಜಾಗತಿಕ ಶಾಂತಿಗಾಗಿ ಪ್ರಾರ್ಥನೆ ನಡೆಯುತ್ತವೆ. ಬಲಿಪೂಜೆಯ ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡುವುದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಂಗಳೂರು ನಗರ ಸಹಿತ ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಅಂಗಡಿ, ಬೇಕರಿಗಳ ಮುಂಭಾಗದಲ್ಲಿ ಸೋಮವಾರ ಜನಸಂದಣಿ ಹೆಚ್ಚಿತ್ತು. ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಚರ್ಚ್‌ಗಳಲ್ಲಿ, ಕ್ರೈಸ್ತರ ಮನೆಗಳಲ್ಲಿ ತಯಾರಿಗಳು ಬಿರುಸು ಪಡೆದಿದೆ.
ಹಬ್ಬದ ಹಿನ್ನೆಲೆ ಕೆಥೋಲಿಕ್ ಹಾಗೂ ಪ್ರೊಟೆಸ್ಟೆಂಟ್‌ನ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪದ ಅಲಂಕಾರ ಮಾಡಲಾಗಿದೆ. ಗೋದಲಿ, ನಕ್ಷತ್ರಗಳೊಂದಿಗೆ ಅಲಂಕರಿಸಲಾಗಿದೆ. ಪ್ರೊಟೆಸ್ಟೆಂಟ್ ಧರ್ಮಪ್ರಾಂತದ ಬಲ್ಮಠ ಸಿಎಸ್‌ಐ ಶಾಂತಿ ಕ್ಯಾಥೆಡ್ರಲ್, ಹೆಬಿಕ್ ಮೆಮೋರಿಯಲ್ ಚರ್ಚ್ ಗೋರಿಗುಡ್ಡ, ಕಾಂತಿ ಚರ್ಚ್ ಜಪ್ಪು, ಕೋಡಿಕ್ಕಲ್ ಕ್ರಿಸ್ಟ್ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ. ಕೆಥೋಲಿಕ್ ಚರ್ಚ್‌ಗಳಾದ ನಗರದ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರ್‌ವೆಲ್, ಅಶೋಕನಗರ, ಬೊಂದೆಲ್, ವಾಮಂಜೂರು, ಪಾಲ್ದನೆ, ಕುಲಶೇಖರ, ಫಳ್ನೀರ್, ಕಾಸಿಯಾ, ಕೂಳೂರು, ಬಿಜೈ, ಬಜಾಲ್, ಶಕ್ತಿನಗರ, ಬಿಕರ್ನಕಟ್ಟೆ ಸಹಿತ ವಿವಿಧ ಚರ್ಚ್‌ಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ.
