Uncategorized

ಸಕ್ಕರೆ ನಾಡಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ: ಡಿಸೆಂಬರ್ 20, 21 ಹಾಗೂ 22 ರಂದು 2024 – 25ನೇ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕರ್ನಾಟಕದ ಸಕ್ಕರೆ ನಾಡು ಎಂಬ ಖ್ಯಾತಿಗೆ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಬೇಕೆಂಬ ಸದುದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿ, ಹಣಕಾಸು ಮತ್ತು ಲೆಕ್ಕಪತ್ರ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ವೇದಿಕೆ ನಿರ್ವಹಣಾ ಸಮಿತಿ, ಆಹಾರ ಸಮಿತಿ, ಕುಡಿಯುವ ನೀರು ನಿರ್ವಹಣಾ ಸಮಿತಿ, ವಸತಿ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಮಾಧ್ಯಮ ಸಮನ್ವಯ ಸಮಿತಿ, ಆರೋಗ್ಯ ಮತ್ತು ವೈದ್ಯಕೀಯ ನೆರವು ಸಮಿತಿ ಹೀಗೆ ಇನ್ನೂ ಅನೇಕ ಸಮಿತಿಗಳ ರಚನೆಯಾಗಿದೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ಉಳಿಸಿ, ಬೆಳೆಸಲು ನಡೆಸುವ ಈ ಸಮ್ಮೇಳನವು ಈ ವರ್ಷ ಮಂಡ್ಯ ಜಿಲ್ಲೆಯ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದಲ್ಲಿರುವ ಮೈದಾನದಲ್ಲಿ ನಡೆಯುತ್ತಿದೆ. ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ ರು ಚನ್ನಬಸಪ್ಪ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಕಾರ್ಯಕ್ರಮಕ್ಕೆ ಭಾಗಿಯಾಗಲು ಹೋಗುವ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು ರಸ್ತೆ ಬದಿಗಳೆಲ್ಲಾ ಕನ್ನಡ ಬಾವುಟಗಳಿಂದ ಅಲಂಕೃತಗೊಂಡಿವೆ. ರಸ್ತೆಗಳು , ವೃತ್ತಗಳು ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಕಾರ್ಯಕ್ರಮದ ಮಹಾ ಮಂಟಪಕ್ಕೆ ಕೆಂಪನಂಜಮ್ಮಣಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಪ್ರಧಾನ ವೇದಿಕೆಗೆ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರುಗಳನ್ನು ಇಡಲಾಗಿದೆ. ಮುಖ್ಯ ಗೇಟ್‌ಗೆ ಎಸ್. ಎಂ. ಕೃಷ್ಣ ಮತ್ತು ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರುಗಳನ್ನು ಇಡಲಾಗಿದೆ. ಈ ಮೂರು ದಿನಗಳಲ್ಲಿ ಒಟ್ಟು 31 ಚರ್ಚಾಕೂಟಗಳು ನಡೆಯಲಿದ್ದು, ಕನ್ನಡ ಸಾಹಿತ್ಯದ ಪ್ರಸ್ತುತ ಸ್ಥಿತಿ, ಸವಾಲುಗಳು ಮತ್ತು ಕನ್ನಡವನ್ನು ಬೋಧನಾಮಾಧ್ಯಮವಾಗಿ ಉತ್ತೇಜಿಸುವ ಅಗತ್ಯದ ಕುರಿತು ಚರ್ಚೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಅನೇಕ ಸ್ಟಾಲ್‌ಗಳನ್ನು ತೆರೆಯುವುದಕ್ಕೆ ಅವಕಾಶ ಕಲ್ಪಿಸಿದ್ದು, ಕರ್ನಾಟಕದ ವಿವಿಧ ಭಾಗಗಳ ಪುಸ್ತಕಗಳು, ಕರಕುಶಲ ವಸ್ತುಗಳು ಮತ್ತು ಇತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. 140 ಆಹಾರದ ಕೌಂಟರ್‌ಗಳು ಮತ್ತು 300 ಕ್ಕೂ ಹೆಚ್ಚು ಬಾಣಸಿಗರು ವೀಕ್ಷಕರಿಗೆ ಮತ್ತು ಪ್ರತಿನಿಧಿಗಳಿಗೆ ಆಹಾರ ಸೇವೆ ನೀಡುತ್ತಿದ್ದಾರೆ.

ಬೇರೆ ಬೇರೆ ತಾಲ್ಲೂಕುಗಳಿಂದ ಕಾರ್ಯಕ್ರಮಕ್ಕೆ ಬರುವ ಆಸಕ್ತರಿಗಾಗಿ 105 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು – ಮೈಸೂರು ದಾರಿಯಲ್ಲಿ ಪ್ರತಿ ಅರ್ಧ ಗಂಟೆಗೊಂದು ವಿಶೇಷ ಬಸ್‌ ಓಡುತ್ತಿದೆ. ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅನೇಕ ಗೋಷ್ಠಿಗಳು ನಡೆದಿದ್ದು, ಕಲೆ ಮತ್ತು ಸಾಹಿತ್ಯಾಭಿಮಾನಿಗಳಿಗೆ ಜ್ಞಾನದ ರಸದೌತಣವಾಗಿದ್ದಂತೂ ನಿಜ.

Leave a Response

error: Content is protected !!