ಮಂಗಳೂರು : ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ

ಮಂಗಳೂರು : ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ

ಮಂಗಳೂರು: ಕಮಿಷನರೇಟ್‌ ವ್ಯಾಪ್ತಿಯ
ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಮತ್ತು ಇತರ ಸಂಸ್ಥೆಗಳು ಹೊಸ ವರ್ಷಾಚರಣೆ ಆಯೋಜಿಸಲು ತಮ್ಮ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಇದೇ 23ರಂದು ಸಂಜೆ 5ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಅವರು ಗುರುವಾರ ಬಿಡುಗಡೆ ಮಾಡಿದ್ದಾರೆ. ಹೊಸ ವರ್ಷಾಚರಣೆ ರಾತ್ರಿ 12ರ ಒಳಗೆ ಪೂರ್ಣಗೊಳ್ಳಬೇಕು. ಆಯೋಜಕರು ಸಂಬಂಧ ಪಟ್ಟ ಇಲಾಖೆಗಳಿಂದ ಪಡೆದ ಪರವಾನಗಿ ಮತ್ತು ಅನುಮತಿ ಪ್ರಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದ್ಯದ ಮಾರಾಟ ಮತ್ತು ವಿತರಣೆಗೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

‘ಧ್ವನಿವರ್ಧಕ ವ್ಯವಸ್ಥೆ, ಲೌಡ್‌ ಸ್ಪೀಕರ್‌ ಬಳಸಲು ಅನುಮತಿ ಅಗತ್ಯ. ಧ್ವನಿಯ ಮಟ್ಟವು ಶಬ್ದ ಮಾಲಿನ್ಯ ನಿಯಮಗಳು ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ಪೂರಕವಾಗಿರಬೇಕು. ಡಿ.ಜೆ.ಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅನಾಹುತದ ತಪ್ಪಿಸಲು ಆಯೋಜಕರು ಕ್ರಮಗಳನ್ನು ಕೈಗೊಳ್ಳಬೇಕು. ವಾಹನ ನಿಲುಗಡೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಪೋಷಕರು ಜೊತೆಯಲ್ಲಿ ಇಲ್ಲದಿದ್ದರೆ 18 ವರ್ಷಕ್ಕಿಂತ ಕೆಳಗಿನವರಿಗೆ ಕಾರ್ಯಕ್ರಮಕ್ಕೆ ಪ್ರವೇಶ ‌ನಿರ್ಬಂಧಿಸಬೇಕು. ಅವರಿಗೆ ಮದ್ಯ ವಿತರಿಸುವಂತಿಲ್ಲ. ಅಶ್ಲೀಲ ನೃತ್ಯ, ಅರೆನಗ್ನ ಪ್ರದರ್ಶನ, ಜೂಜು ಮತ್ತಿತರ ಅಸಭ್ಯ ಚಟುವಟಿಗೆ ನಡೆಸುವಂತಿಲ್ಲ. ಆಯೋಜಕರು ಅಗ್ನಿಶಾಮಕ ಸಾಧನ, ಆಂಬುಲೆನ್ಸ್‌ ಮತ್ತಿತರ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂಚಿಸಿದ್ದಾರೆ

ಬಸ್ ನಿಲ್ದಾಣಗಳು, ಉದ್ಯಾನಗಳು, ಕ್ರೀಡಾಂಗಣಗಳು, ರೈಲ್ವೆ ನಿಲ್ದಾಣ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ದುರಾಚಾರ ಅಥವಾ ಗಲಾಟೆ ಮಾಡಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮನೆಗಳಿಗೆ, ಹೋಟೆಲ್‌ಗಳಿಗೆ, ಹಾಸ್ಟೆಲ್‌ಗಳಿಗೆ ಹೋಗಿ ಶಾಂತಿಭಂಗ ಮಾಡುವಂತಿಲ್ಲ. ಸಾರ್ವಜನಿಕವಾಗಿ ಮದ್ಯ ಸೇವಿಸುವುದು, ಶಬ್ದವನ್ನುಂಟುಮಾಡುವುದು, ಅವಹೇಳನ ಮಾಡುವುದು ಅಥವಾ ಬೀದಿಗಳಿಗೆ ಬಾಟಲಿಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳ ಅಥವಾ ಕಿನಾರೆಗಳಲ್ಲಿ ಮದ್ಯ ಸೇವಿಸುವುದು, ಅಶ್ಲೀಲ ವರ್ತನೆ ಮತ್ತಿತರ ಅಶ್ಲೀಲ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ಸಿಡಿಮದ್ದು ಅಥವಾ ಪಟಾಕಿ ಸಿಡಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಹಿಳೆಯರಿಗೆ ಕಿರುಕುಳ ತಡೆಗೆ ಕಾರ್ಯಪಡೆ

ಮಹಿಳೆಯರಿಗೆ ಕಿರುಕುಳ ಹಿಂಸೆ ನೀಡುವುದನ್ನು ಹಾಗೂ ಅಶ್ಲೀಲ ಚಟುವಟಿಕೆ ತಡೆಹಿಡಿಯಲು ವಿಶೇಷ ಕಾರ್ಯಪಡೆಗಳು ನಿಯೋಜಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ ಪಾನಮತ್ತರಾಗಿ ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದ್ದು ನಗರದ ಎಲ್ಲಾ ಪ್ರದೇಶಗಳಲ್ಲಿ ಇದು ಕಾರ್ಯಾಚರಣೆ ನಡೆಸಲಿದೆ. ಸ್ಟಂಟ್ ವ್ಹೀಲಿಂಗ್‌ ಡ್ರ್ಯಾಗ್ ರೇಸಿಂಗ್ ಅತಿವೇಗದಲ್ಲಿ ವಾಹನ ಚಲಾಯಿಸುವುದು ಮತ್ತು ವಾಹನಗಳಿಂದ ಜೋರಾಗಿ ಸದ್ದುಂಟುಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯಗಳನ್ನು ತಡೆಯಲು ವಿಶೇಷ ತಂಡಗಳು ನಿಯೋಜಿಸಲಾಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ