
ಮಹಾಕುಂಭ ಮೇಳವು 12 ವರ್ಷಗಳಿಮ್ಮೆ ಉತ್ತರಪ್ರದೇಶದಲ್ಲಿನ ಗಂಗಾ-ಯಮುನಾ ಮತ್ತು ಸರಸ್ವತಿ ನದಿಗಳು ಒಂದನ್ನೊಂದು ಸಂಧಿಸುವ ಪುಣ್ಯಸ್ಥಳ ಪ್ರಯಾಗರಾಜದಲ್ಲಿ ನಡೆಯುತ್ತದೆ. ಅಂದು ದೇಶ-ವಿದೇಶದ ಭಕ್ತಾದಿಗಳೆಲ್ಲ ಈ ಮಹಾಮೇಳದಲ್ಲಿ ಭಾಗವಹಿಸುತ್ತಾರೆ.

ಅಂತೆಯೇ ಈ ಬಾರಿ ಮಹಾಕುಂಭ ಮೇಳವು 2025 ರ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ಶಿವರಾತ್ರಿಯಂದು ಕೊನೆಗೊಳ್ಳಲಿದೆ.
ಈ ಮಹಾಮೇಳವು ಯಶಸ್ವಿಯಾಗಬೇಕೆಂಬ ಸದುದ್ದೇಶದಿಂದ ನಮ್ಮ ಕೇಂದ್ರ ಸರಕಾರವು ಅನೇಕ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಭಾರತೀಯ ರೈಲ್ವೇ ಇಲಾಖೆಯಿಂದ 3,000 ವಿಶಿಷ್ಟ ರೈಲುಗಳನ್ನು ಒಳಗೊಂಡಂತೆ, 13,000 ರೈಲುಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಗಳು ರೈಲ್ವೇ ಮಂತ್ರಿಗಳಾದ ಶ್ರೀಯುತ ಅಶ್ವಿನಿ ವೈಷ್ಣವ್ ಇವರ ಮೇಲ್ವಿಚಾರಣೆಯಲ್ಲಿ ಭರದಿಂದ ಸಾಗುತ್ತಿವೆ. ತಾವೇ ಖುದ್ದಾಗಿ ರೈಲಿನಲ್ಲಿ ಪ್ರಯಾಣಿಸಿ, ಪ್ರಯಾಗರಾಜ್‌ನಲ್ಲಿನ ವಿವಿಧ ರೈಲ್ವೇಗಳನ್ನು ಪರಿಶೀಲಿಸಿ ಪ್ರಯಾಣಿಕರಿಗೆ ಬೇಕಾದ ಸೌಕರ್ಯ ಪೂರೈಕೆಯನ್ನು ಪರಿಶೀಲಿಸಿದ್ದಾರೆ. ಗಂಗಾ ನದಿಯ ಮೇಲೆ ಹೊಸತಾಗಿ ಸೇತುವೆಯನ್ನು ಕಟ್ಟಲಾಗಿದ್ದು, ಈ ಸೇತುವೆಯನ್ನು 100 ವರ್ಷಗಳ ಬಳಿಕ ಕಟ್ಟಲಾಗಿದೆ.
ಮೊಬೈಲ್ ಯುಟಿಎಸ್ ಅನ್ನು ಪ್ರಯಾಗರಾಜ್‌ನಲ್ಲಿ ಮೊದಲ ಬಾರಿಗೆ ಬಳಸಲಾಗುವುದು. ಪ್ರಯಾಗರಾಜ್ – ವಾರಣಾಸಿ ನಡುವಿನ ರೈಲ್ವೆ ಹಳಿಗಳನ್ನು ದ್ವಿಗುಣಗೊಳಿಸಲಾಗಿದೆ. ಫಾಫಮೌ-ಜಂಘೈ ವಿಭಾಗವನ್ನು ದ್ವಿಗುಣಗೊಳಿಸಲಾಗಿದೆ. ಝಾನ್ಸಿ, ಫಾಫಮೌ, ಪ್ರಯಾಗ್‌ರಾಜ್, ಸುಬೇದರ್‌ಗಂಜ್, ನೈನಿ ಮತ್ತು ಚಿಯೋಕಿ ನಿಲ್ದಾಣಗಳಲ್ಲಿ ಎರಡನೇ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ಪ್ರತೀ ರೈಲ್ವೇ ನಿಲ್ದಾಣಗಳಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದ್ದು, ಅವು ಅಯಾ ಸ್ಥಳದ ಮಾಹಿತಿಯನ್ನು ನೇರವಾಗಿ ಪ್ರಯಾಗ್‌ರಾಜ್‌ನಲ್ಲಿನ ಪ್ರಧಾನ ಕಂಟ್ರೋಲ್ ರೂಮ್‌ಗೆ ರವಾನಿಸಲಿವೆ. ಅಷ್ಟೇ ಅಲ್ಲದೆ, ಕುಂಭಮೇಳ ನಡೆಯುವ ಸ್ಥಳದಲ್ಲಿ ಅನೇಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು, ಅವು ಮತ್ತು ಪೊಲೀಸ್ ಠಾಣೆಗಳಿಂದಲೂ ಮಾಹಿತಿಯು ಪ್ರಧಾನ ಕಂಟ್ರೋಲ್ ರೂಮ್‌ಗೆ ರವಾನೆಯಾಗಲಿದೆ. ಭಾರತೀಯ ರೈಲ್ವೇಯು ಕಳೆದ 2 ವರ್ಷಗಳಿಂದ ಮಹಾಕುಂಭ ಮೇಳಕ್ಕೆಂದೇ ಸುಮಾರು 5000 ಕೋಟಿಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದೆ.
ಮಹಾಕುಂಭ ಮೇಳ 2025 – ಕಾರ್ಯಕ್ರಮಗಳ ವಿವರಗಳು
- ಪೌಷ್ ಪೂರ್ಣಿಮಾ: ಜನವರಿ 13, 2025
- ಮಕರ ಸಂಕ್ರಾಂತಿ (ಮೊದಲನೇ ಶಾಹಿ ಸ್ನಾನ): ಜನವರಿ 14, 2025
- ಮೌನಿ ಅಮವಾಸ್ಯೆ (ಎರಡನೇ ಶಾಹಿ ಸ್ನಾನ): ಜನವರಿ 29, 2025
- ವಸಂತ ಪಂಚಮಿ (ಮೂರನೇ ಶಾಹಿ ಸ್ನಾನ): ಫೆಬ್ರವರಿ 3, 2025
- ಮಾಘ ಪೂರ್ಣಿಮಾ: ಫೆಬ್ರವರಿ 12, 2025
- ಮಹಾ ಶಿವರಾತ್ರಿ: ಫೆಬ್ರವರಿ 26, 2025
ಅಂದು ಪ್ರಯಾಗರಾಜವು ಅನೇಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಶಾಹೀ ಸ್ನಾನಗಳ ಜೊತೆಗೆ, ಯೋಗಾಭ್ಯಾಸ, ಧ್ಯಾನ, ಭಜನೆ – ಸಂಕೀರ್ತನೆಗಳು ಮತ್ತು ಅನೇಕ ಸಾಧು ಸಂತರ ಧಾರ್ಮಿಕ ಪ್ರವಚನಗಳು ನಡೆಯಲಿವೆ.
ಮಹಾ ಕುಂಭಕ್ಕೆಂದು ಪ್ರಯಾಗರಾಜಕ್ಕೆ ತೆರಳುವ ಯಾತ್ರಾರ್ಥಿಗಳು ಅಲ್ಲಿಯೇ ಇರುವ ಇತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡಬಹುದು. ಅವುಗಳ ಒಂದು ಕಿರು ಮಾಹಿತಿ ಇಲ್ಲಿದೆ;
ಮಲಗಿರುವ ಹನುಮಂತ ದೇವಾಲಯ: ಗಂಗಾತೀರದ ದರಾಗಂಜ್‌ನಲ್ಲಿರುವ ಸಂಕಟಮೋಚನ ಹನುಮಾನ್ ದೇವಾಲಯವನ್ನು ಸಂತ ಸಮರ್ಥ ಗುರು ರಾಮದಾಸರು ಸ್ಥಾಪಿಸಿದರು. ಹನುಮಾನ್ ದೇವಾಲಯದ ಪಕ್ಕದಲ್ಲಿಯೇ ಶ್ರೀರಾಮ – ಜಾನಕಿ ದೇವಾಲಯ ಮತ್ತು ಹರಿಮಾಧವ ದೇವಾಲಯವಿದೆ.

ಆಲೋಪಿ ದೇವಿ ದೇವಾಲಯ: ಇದು ಪ್ರಯಾಗರಾಜದ ಆಲೋಪಿ ಬಾಘ್ ನಲ್ಲಿದೆ. ಈ ದೇವಾಲಯದಲ್ಲಿ ಯಾವುದೇ ದೇವಿ ಅಥವಾ ದೇವರ ಮೂರ್ತಿ ಇಲ್ಲ. ಬದಲಾಗಿ ಇಲ್ಲಿ ಒಂದು ಮರದ ಪಲ್ಲಕ್ಕಿ ಇದೆ. ಅದನ್ನೇ ಪೂಜೆ ಮಾಡಲಾಗುತ್ತದೆ.

ಮಂಕಾಮೇಶ್ವರ ದೇವಾಲಯ: ಈ ದೇವಾಲಯವು ಯಮುನಾ ನದಿ ತೀರದಲ್ಲಿರುವ ಮಿಂಟೋ ಪಾರ್ಕ್ ಬಳಿ ಇದೆ. ಇಲ್ಲಿ ಕಪ್ಪು ಬಣ್ಣದ ಶಿವಲಿಂಗ, ಗಣೇಶ ಮತ್ತು ನಂದಿಯ ಮೂರ್ತಿಗಳಿವೆ. ಇದೇ ದೇವಾಲಯದ ಬಳಿ ಒಂದು ಅದ್ಭುತ ಹನುಮಂತನ ಮೂರ್ತಿ ಹಾಗೂ ಪುರಾತನ ಅಶ್ವತ್ಥ ಮರವೂ ಇದೆ.

ಅಶೋಕ ಸ್ಥಂಭ : ನಮ್ಮ ಹೆಮ್ಮೆ ನಮ್ಮ ಧ್ವಜ. ನಮ್ಮ ಧ್ವಜದ ಮಧ್ಯದಲ್ಲಿ ನೀಲಿ ಬಣ್ಣದಲ್ಲಿ ಕಂಗೊಳಿಸುವ 24 ಗೆರೆಗಳಿರುವ ಅಶೋಕ ಚಕ್ರವನ್ನು ತೆಗೆದುಕೊಂಡದ್ದು ಅಶೋಕ ಸ್ಥಂಭದಿಂದ. ಮಹಾಮೇಳಕ್ಕೆ ಹೋದವರು ಈ ಅಶೋಕ ಸ್ಥಂಭವನ್ನು ಕೂಡಾ ನೋಡಬಹುದು.

ಇವಿಷ್ಟೇ ಅಲ್ಲದೇ, ನಾಗವಾಸುಕಿ ದೇವಾಲಯ, ಶಂಕರ ವಿಮಾನ ಮಂಟಪ, ಶ್ರೀವೇಣಿ ಮಾಧವ ದೇವಾಲಯ, ಪಟಾಲ್ಪುರಿ ದೇವಾಲಯ, ಸರಸ್ವತಿ ಕೂಪ, ದಶಾಶ್ವಮೇಧ ದೇವಾಲಯ ಮತ್ತು ತಕ್ಷಕೇಶ್ವರನಾಥ ದೇವಾಲಯ ಹೀಗೆ ಅನೇಕ ದೇವಾಲಯಗಳಿವೆ. ದೇವಾಲಯಗಳಷ್ಟೇ ಅಲ್ಲದೆ, ಆನಂದ ಭವನ, ಪ್ರಯಾಗರಾಜ್ ವಸ್ತುಸಂಗ್ರಹಾಲಯ ಹೀಗೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಕೂಡಾ ಇವೆ.

