ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಇರಾನ್ ಈಗ ನೇರವಾಗಿಯೇ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದು, ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ತನ್ನ ಭೂಸೇನೆಯನ್ನು ಅಖಾಡಕ್ಕಿಳಿಸಿ ದಾಳಿ ಚುರುಕುಗೊಳಿಸುತ್ತಿದ್ದಂತೆ, ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದೆ. “ಅಮೆರಿಕ ಮತ್ತು ಇಸ್ರೇಲ್ ತನ್ನ ದೌರ್ಜನ್ಯ ನಿಲ್ಲಿಸದಿದ್ದರೆ, ಪ್ರವಾಸಿ ತಾಣಗಳು ಸೇರಿದಂತೆ ಪ್ರಮುಖ ಕೇಂದ್ರಗಳ ಮೇಲೆ ನಾವು ದಾಳಿ ನಡೆಸಬೇಕಾಗುತ್ತದೆ” ಎಂದು ಇರಾನ್ ಮೂಲಗಳು ತಿಳಿಸಿವೆ.
ಈ ಎಚ್ಚರಿಕೆಯಿಂದಾಗಿ ವಿಶ್ವದ ಪ್ರಮುಖ ಪ್ರವಾಸಿ ರಾಷ್ಟ್ರಗಳು ಹೈ ಅಲರ್ಟ್ ಘೋಷಿಸಿವೆ. ವಿಶೇಷವಾಗಿ ಇಸ್ರೇಲ್ ಮತ್ತು ಅದರ ಮಿತ್ರ ರಾಷ್ಟ್ರಗಳಲ್ಲಿರುವ ಪ್ರವಾಸಿಗರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಅಮೆರಿಕ ಕೂಡ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನ್ನ ಪ್ರಜೆಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.

