ಕ್ರಿಕೆಟ್ ಪ್ರೇಮಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. 2026ರ ಟಿ20 ವಿಶ್ವಕಪ್ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ. ಪಾಕಿಸ್ತಾನ ಸರ್ಕಾರವು ಈ ಹಿಂದೆ ಘೋಷಿಸಿದ್ದ ಪಂದ್ಯ ಬಹಿಷ್ಕಾರದ ನಿರ್ಧಾರವನ್ನು ಅಧಿಕೃತವಾಗಿ ಹಿಂಪಡೆದಿದೆ.

ಪಾಕಿಸ್ತಾನವು ಭಾರತದೊಂದಿಗಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದು ಟೂರ್ನಿಯ ಮೇಲೆ ಕರಿನೆರಳು ಬೀರಲಿತ್ತು. ಆದರೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸರ್ಕಾರಗಳ ನಿರಂತರ ಸಂಧಾನ ಮತ್ತು ಮನವಿಯ ಮೇರೆಗೆ ಪಾಕಿಸ್ತಾನ ಈ ನಿರ್ಧಾರಕ್ಕೆ ಬಂದಿದೆ. ಬಹುಪಕ್ಷೀಯ ಚರ್ಚೆಗಳ ನಂತರ, ಕ್ರೀಡೆಯ ಹಿತದೃಷ್ಟಿಯಿಂದ ತಂಡವನ್ನು ಕಳುಹಿಸಲು ಪಾಕ್ ಸರ್ಕಾರ ಒಪ್ಪಿಕೊಂಡಿದೆ.
”ಮಿತ್ರ ರಾಷ್ಟ್ರಗಳ ವಿನಂತಿ ಮತ್ತು ಬಹುಪಕ್ಷೀಯ ಮಾತುಕತೆಗಳ ಯಶಸ್ಸಿನ ಹಿನ್ನೆಲೆಯಲ್ಲಿ, ಫೆಬ್ರವರಿ 15ರಂದು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಣಕ್ಕಿಳಿಯಲು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸರ್ಕಾರ ಸೂಚನೆ ನೀಡಿದೆ,” ಎಂದು ಪಾಕ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಿರ್ಧಾರದಿಂದಾಗಿ ಫೆಬ್ರವರಿ 15ರಂದು ಕೊಲೊಂಬೊದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಇದ್ದ ಅನಿಶ್ಚಿತತೆ ದೂರವಾಗಿದ್ದು, ಅಭಿಮಾನಿಗಳು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲು ಸಜ್ಜಾಗಿದ್ದಾರೆ.

