ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಶೀಘ್ರದಲ್ಲೇ ಹೊಸ ಪ್ರೀಮಿಯಂ ರೈಲು ಸೇವೆ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಈ ಹೊಸ ಪ್ರೀಮಿಯಂ ರೈಲು ಸೇವೆಯು ಎರಡು ನಗರಗಳ ನಡುವಿನ ಸಂಪರ್ಕವನ್ನು ವೃದ್ಧಿಸುವುದಲ್ಲದೆ, ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ.
ಕರ್ನಾಟಕಕ್ಕೆ ಬಂಪರ್ ಅನುದಾನ: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಈ ಬಾರಿ ದಾಖಲೆ ಮಟ್ಟದ 7,748 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ಯುಪಿಎ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಅನುದಾನಕ್ಕಿಂತ ಒಂಬತ್ತು ಪಟ್ಟು ಹೆಚ್ಚು ಎಂದು ಸಚಿವರು ಅಂಕಿಅಂಶಗಳ ಸಮೇತ ವಿವರಿಸಿದರು. ಸದ್ಯ ರಾಜ್ಯದಲ್ಲಿ ಒಟ್ಟು 52,950 ಕೋಟಿ ರೂ. ಮೊತ್ತದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ.
”ಭಾರೀ ಪ್ರಮಾಣದ ಈ ಹೂಡಿಕೆಯು ಹಳಿಗಳ ನಿರ್ಮಾಣ, ನಿಲ್ದಾಣಗಳ ನವೀಕರಣ, ಸುರಕ್ಷತಾ ಕ್ರಮಗಳು ಮತ್ತು ಹೊಸ ಯೋಜನೆಗಳ ಅನುಷ್ಠಾನಕ್ಕೆ ಬಳಕೆಯಾಗಲಿದೆ,” ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

