ವಡೋದರಾ: ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಡಬ್ಲ್ಯೂಪಿಎಲ್ ಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಯುಪಿ ವಾರಿಯರ್ಸ್ ತಂಡದ ಪ್ಲೇ-ಆಫ್ ಕನಸು ಬಹುತೇಕ ಭಗ್ನಗೊಂಡಿದೆ.

ಬೌಲಿಂಗ್‌ನಲ್ಲಿ ಮಿಂಚಿದ ನಡಿನ್ ಡಿ ಕ್ಲರ್ಕ್ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಅಬ್ಬರಿಸಿದ ಯುಪಿ ವಾರಿಯರ್ಸ್ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ನಡಿನ್ ಡಿ ಕ್ಲರ್ಕ್ ಯಶಸ್ವಿಯಾದರು. ಕೇವಲ 22 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಯುಪಿ ತಂಡದ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ಗ್ರೇಸ್ ಹ್ಯಾರಿಸ್ ಕೂಡ 22 ರನ್ ನೀಡಿ 2 ವಿಕೆಟ್ ಪಡೆದು ಸಾಥ್ ನೀಡಿದರು. ಇದರಿಂದಾಗಿ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.
ಹ್ಯಾರಿಸ್ ಬ್ಯಾಟಿಂಗ್ ಅಬ್ಬರ 144 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಗ್ರೇಸ್ ಹ್ಯಾರಿಸ್ ಆಸರೆಯಾದರು. ಆರಂಭದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹ್ಯಾರಿಸ್, ಕೇವಲ 37 ಎಸೆತಗಳಲ್ಲಿ ಸ್ಫೋಟಕ 75 ರನ್ ಚಚ್ಚಿದರು. ಇವರ ಈ ಬಿರುಸಿನ ಆಟದ ನೆರವಿನಿಂದ ಆರ್‌ಸಿಬಿ ಇನ್ನೂ 41 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

