ಭಾರತೀಯ ಚಿತ್ರರಂಗದ ಖ್ಯಾತ ಗಾಯಕ, ‘ಮೆಲೋಡಿ ಕಿಂಗ್’ ಎಂದೇ ಕರೆಯಲ್ಪಡುವ ಅರಿಜಿತ್ ಸಿಂಗ್ ಅವರು ಪ್ಲೇಬ್ಯಾಕ್ ಸಿಂಗಿಂಗ್ಗೆ (ಹಿನ್ನೆಲೆ ಗಾಯನ) ಹಠಾತ್ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, “ನಾನು ಈ ಪಯಣವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
”ನನ್ನ ಪಯಣ ಅದ್ಭುತವಾಗಿತ್ತು” ತಮ್ಮ ಭಾವಪೂರ್ಣ ಸಂದೇಶದಲ್ಲಿ ಅರಿಜಿತ್ ಹೀಗೆ ಬರೆದಿದ್ದಾರೆ: “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷಗಳ ಕಾಲ ಒಬ್ಬ ಕೇಳುಗನಾಗಿ ನನಗೆ ಅಪಾರ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಇಂದಿನಿಂದ ನಾನು ಯಾವುದೇ ಹೊಸ ಹಿನ್ನೆಲೆ ಗಾಯನದ ಕೆಲಸಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಘೋಷಿಸಲು ಸಂತೋಷಪಡುತ್ತೇನೆ. ಇದು ಅದ್ಭುತವಾದ ಪ್ರಯಾಣವಾಗಿತ್ತು.”
ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ನಿರ್ಧಾರ: ಅರಿಜಿತ್ ಸಿಂಗ್ ಅವರು ಪ್ರಸ್ತುತ ಬಾಲಿವುಡ್ನ ಅತ್ಯಂತ ಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಾಗಿದ್ದಾರೆ. ಅವರ ವೃತ್ತಿಜೀವನವು ಉತ್ತುಂಗದಲ್ಲಿರುವಾಗಲೇ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದು ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದೆ.
ಅರಿಜಿತ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಕಂಗಾಲಾಗಿದ್ದಾರೆ. “ನಿಮ್ಮ ಧ್ವನಿಯಿಲ್ಲದೆ ಬಾಲಿವುಡ್ ಅಪೂರ್ಣ” ಎಂದು ಹಲವರು ಕಾಮೆಂಟ್ ಮಾಡುತ್ತಿದ್ದು, ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುತ್ತಿದ್ದಾರೆ.

