BBK12 Winner: ಬಿಗ್ ಬಾಸ್ ಕನ್ನಡ 12ರ ವಿಜೇತ ಪಟ್ಟ ಗೆದ್ದ ಗಿಲ್ಲಿ ನಟ; ಸಿಕ್ಕ ಬಹುಮಾನವೆಷ್ಟು?

BBK12 Winner: ಬಿಗ್ ಬಾಸ್ ಕನ್ನಡ 12ರ ವಿಜೇತ ಪಟ್ಟ ಗೆದ್ದ ಗಿಲ್ಲಿ ನಟ; ಸಿಕ್ಕ ಬಹುಮಾನವೆಷ್ಟು?

​ಬೆಂಗಳೂರು: ಕಿಚ್ಚ ಸುದೀಪ್ ಸಾರಥ್ಯದ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕ್ಕೆ ತೆರೆ ಬಿದ್ದಿದೆ. ಕಳೆದ 112 ದಿನಗಳಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದ ಈ ಸೀಸನ್‌ನಲ್ಲಿ ಅಂತಿಮವಾಗಿ ಗಿಲ್ಲಿ ನಟ (ನಟರಾಜ್) ಅವರು ಟ್ರೋಫಿ ಎತ್ತಿ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಅಂತಿಮ ಹಣಾಹಣಿ: ರಕ್ಷಿತಾ ಶೆಟ್ಟಿ ರನ್ನರ್ ಅಪ್​ ತೀವ್ರ ಕುತೂಹಲ ಮೂಡಿಸಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ವೇದಿಕೆಯ ಮೇಲೆ ಉಳಿದಿದ್ದರು. ಅಂತಿಮವಾಗಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ಅವರ ಕೈ ಎತ್ತಿ ಹಿಡಿಯುವ ಮೂಲಕ ವಿಜೇತರೆಂದು ಘೋಷಿಸಿದರು.ತುಳುನಾಡ ಯೂಟ್ಯೂಬ್ ವ್ಲಾಗರ್‌ ರಕ್ಷಿತಾ ಶೆಟ್ಟಿ ಪ್ರಥಮ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು ಅಶ್ವಿನಿ ಗೌಡ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ವಿಜೇತರಿಗೆ ಸಂದ ಗೌರವ ಮತ್ತು ಬಹುಮಾನಗಳು ಬಿಗ್ ಬಾಸ್ ಸೀಸನ್ 12ರ ವಿಜೇತರಾದ ಗಿಲ್ಲಿ ನಟ ಅವರಿಗೆ ಈ ಕೆಳಗಿನ ಬಹುಮಾನಗಳು ಲಭಿಸಿವೆ:

  • ​ರೂ. 50 ಲಕ್ಷ ನಗದು ಬಹುಮಾನ (ಸಿನಿಮಾ ಬಜಾರ್ ಮತ್ತು ಪ್ರಾಯೋಜಕರಿಂದ).​
  • ಬ್ರ್ಯಾಂಡ್ ನ್ಯೂ Maruti Suzuki Victoris ಐಷಾರಾಮಿ ಕಾರು.​
  • ಪ್ರತಿಷ್ಠಿತ ಬಿಗ್ ಬಾಸ್ ಸೀಸನ್ 12ರ ಚಿನ್ನದ ಲೇಪಿತ ಟ್ರೋಫಿ.​
  • ಇದರ ಜೊತೆಗೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಗಿಲ್ಲಿಗೆ ರೂ. 10 ಲಕ್ಷ ವಿಶೇಷ ಬಹುಮಾನ ಘೋಷಿಸಿದ್ದಾರೆ.

37 ಕೋಟಿ ಮತಗಳ ದಾಖಲೆ!​ ಈ ಬಾರಿ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಚಲಾವಣೆಯಾಗಿವೆ ಎಂದು ಸುದೀಪ್ ತಿಳಿಸಿದ್ದಾರೆ. ಮಂಡ್ಯದ ಮಣ್ಣಿನ ಮಗನಾಗಿ, ಹಾಸ್ಯದ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನೆಮಾತಾಗಿದ್ದ ಗಿಲ್ಲಿ ನಟ ಅವರಿಗೆ ಜನಸಾಮಾನ್ಯರು ಅಭೂತಪೂರ್ವ ಬೆಂಬಲ ನೀಡಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನವರಾದ ಗಿಲ್ಲಿ ನಟ, ಚಿತ್ರರಂಗದಲ್ಲಿ ಸೆಟ್ ಅಸಿಸ್ಟೆಂಟ್ ಆಗಿ ವೃತ್ತಿ ಜೀವನ ಆರಂಭಿಸಿ ಇಂದು ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಮನೋರಂಜನೆ ರಾಜ್ಯ