ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನೀಡಿದ್ದ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ, ‘ಪವರ್ ಟಿವಿ’ ವ್ಯವಸ್ಥಾಪಕ ನಿರ್ದೇಶಕ (MD) ರಾಕೇಶ್ ಶೆಟ್ಟಿ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು? ಪ್ರಸ್ತುತ ಕರ್ನಾಟಕ ಪೂರ್ವ ವಲಯದ ಪೊಲೀಸ್ ಐಜಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ.ಆರ್. ರವಿಕಾಂತೇಗೌಡ ಅವರ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯವು 2023ರ ಸೆಪ್ಟೆಂಬರ್ 08 ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಆದರೆ, ಈ ನ್ಯಾಯಾಂಗ ಆದೇಶವನ್ನು ಲೆಕ್ಕಿಸದೆ ಚಾನೆಲ್ ಸುದ್ದಿ ಪ್ರಸಾರ ಮುಂದುವರಿಸಿತ್ತು. ಈ ಹಿನ್ನೆಲೆಯಲ್ಲಿ ರವಿಕಾಂತೇಗೌಡ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು, ರಾಕೇಶ್ ಶೆಟ್ಟಿ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಮಾನಿಸಿತು.
”ಪ್ರತಿವಾದಿಯು (ರಾಕೇಶ್ ಶೆಟ್ಟಿ) 08.09.2023 ರಂದು ಈ ನ್ಯಾಯಾಲಯವು ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯ ಆದೇಶವನ್ನು ಉಲ್ಲಂಘಿಸಿರುವುದು ಮತ್ತು ಅವಿಧೇಯತೆ ತೋರಿರುವುದು ಸಾಬೀತಾಗಿದೆ,” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

