ನವದೆಹಲಿ: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ‘ಬ್ಲಿಂಕಿಟ್’ (Blinkit) ತನ್ನ ಪ್ಲಾಟ್‌ಫಾರ್ಮ್‌ಗಳಿಂದ ’10 ನಿಮಿಷಗಳಲ್ಲಿ ಡೆಲಿವರಿ’ ಎಂಬ ವಿವಾದಿತ ಟ್ಯಾಗ್‌ಲೈನ್ ಅನ್ನು ಅಧಿಕೃತವಾಗಿ ತೆಗೆದುಹಾಕಿದೆ. ಡೆಲಿವರಿ ಪಾಲುದಾರರ ಸುರಕ್ಷತೆ ಮತ್ತು ಕೆಲಸದ ಒತ್ತಡದ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಬದಲಾದ ಟ್ಯಾಗ್‌ಲೈನ್ ಏನು? ಈ ಮೊದಲು ಬ್ಲಿಂಕಿಟ್ “10 ನಿಮಿಷಗಳಲ್ಲಿ 10,000+ ಉತ್ಪನ್ನಗಳ ವಿತರಣೆ” ಎಂಬ ಭರವಸೆ ನೀಡುತ್ತಿತ್ತು. ಈಗ ಇದನ್ನು ಬದಲಾಯಿಸಲಾಗಿದ್ದು, “30,000+ ಉತ್ಪನ್ನಗಳು ನಿಮ್ಮ ಮನೆಬಾಗಿಲಿಗೆ” ಎಂದು ಪರಿಷ್ಕರಿಸಲಾಗಿದೆ. ಡೆಲಿವರಿ ಸಮಯಕ್ಕಿಂತ ಹೆಚ್ಚಾಗಿ ಉತ್ಪನ್ನಗಳ ವೈವಿಧ್ಯತೆಗೆ ಕಂಪನಿ ಈಗ ಆದ್ಯತೆ ನೀಡುತ್ತಿದೆ.
ಕೇಂದ್ರ ಕಾರ್ಮಿಕ ಸಚಿವಾಲಯವು ಇತ್ತೀಚೆಗೆ ಕ್ವಿಕ್ ಕಾಮರ್ಸ್ ಕಂಪನಿಗಳೊಂದಿಗೆ ಸಭೆ ನಡೆಸಿತ್ತು. ಅಲ್ಪಾವಧಿಯ ಡೆಲಿವರಿ ಗುರಿಗಳು ಗಿಗ್ ಕಾರ್ಮಿಕರ (Gig Workers) ಆರೋಗ್ಯ ಮತ್ತು ರಸ್ತೆ ಸುರಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿತ್ತು.
ಎಟರ್ನಲ್ ಗ್ರೂಪ್ (Blinkit ಮಾಲೀಕತ್ವದ ಸಂಸ್ಥೆ) ಸಿಇಒ ದೀಪಿಂದರ್ ಗೋಯಲ್ ಈ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಸ್ಪಷ್ಟನೆ ನೀಡಿದ್ದಾರೆ. “10 ನಿಮಿಷದ ಡೆಲಿವರಿಯಿಂದ ಸವಾರರಿಗೆ ಯಾವುದೇ ಒತ್ತಡವಿರುವುದಿಲ್ಲ. ಅವರಿಗೆ ಆ್ಯಪ್‌ನಲ್ಲಿ ಯಾವುದೇ ಟೈಮರ್ ಕಾಣಿಸುವುದಿಲ್ಲ. ನಮ್ಮ ಸ್ಟೋರ್‌ಗಳು ಗ್ರಾಹಕರಿಗೆ ಹತ್ತಿರದಲ್ಲಿರುವುದರಿಂದ ವೇಗವಾಗಿ ಡೆಲಿವರಿ ಸಾಧ್ಯವಾಗುತ್ತದೆಯೇ ಹೊರತು, ಸವಾರರು ವೇಗವಾಗಿ ಚಲಿಸುವುದರಿಂದ ಅಲ್ಲ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಲಿಂಕಿಟ್ ತನ್ನ ಬ್ರ್ಯಾಂಡಿಂಗ್ ಬದಲಿಸಿಕೊಂಡಿದ್ದರೆ, ಜೆಪ್ಟೋ ಮತ್ತು ಬಿಗ್‌ಬಾಸ್ಕೆಟ್‌ನಲ್ಲಿ ಇನ್ನೂ ಹಳೆಯ ಟ್ಯಾಗ್‌ಲೈನ್‌ಗಳೇ ಕಾಣಿಸುತ್ತಿವೆ.

