ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಇದೀಗ ವಿವಾದದ ಸುಳಿಗೆ ಸಿಲುಕಿದೆ. ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಾರ್ಟಿ (AAP), ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಿದೆ.

ಸಂಸ್ಕೃತಿಗೆ ಧಕ್ಕೆ: ಆಪ್ ಆರೋಪ ಸೋಮವಾರ ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ಎಎಪಿ ಮಹಿಳಾ ಘಟಕದ ನಾಯಕಿಯರು, ಚಿತ್ರದ ಟೀಸರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿವೆ ಮತ್ತು ಕನ್ನಡ ಸಂಸ್ಕೃತಿಗೆ ಅಪಮಾನ ಮಾಡುವಂತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
”ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿರುವ ಅಶ್ಲೀಲ ಮತ್ತು ಅತಿರೇಕದ ದೃಶ್ಯಗಳು ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿವೆ. ಇವುಗಳನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಬಿಡುಗಡೆ ಮಾಡಿರುವುದು ಸರಿಯಲ್ಲ,” ಎಂದು ಆಪ್ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಪತ್ರದಲ್ಲಿ ತಿಳಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಬಗ್ಗೆ ಈಗಾಗಲೇ ಭಾರಿ ಕುತೂಹಲವಿದೆ. ಆದರೆ, ರಾಜಕೀಯ ಪಕ್ಷವೊಂದು ಮಹಿಳಾ ಆಯೋಗದ ಮೆಟ್ಟಿಲೇರಿರುವುದು ಚಿತ್ರತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ದೂರಿನ ಕುರಿತು ಮಹಿಳಾ ಆಯೋಗವು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಅಥವಾ ಚಿತ್ರತಂಡವು ಸ್ಪಷ್ಟನೆ ನೀಡಲಿದೆಯೇ ಎಂಬುದು ಕಾದು ನೋಡಬೇಕಿದೆ.

