ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಉಗ್ರರ ಮೂಲಸೌಕರ್ಯ ಹಾಗೂ ಅವರಿಗೆ ತಲುಪುವ ಆರ್ಥಿಕ ನೆರವನ್ನು (Terror Financing) ಗುರಿಯಾಗಿಸಿಕೊಂಡು ‘ಮಿಷನ್ ಮೋಡ್’ನಲ್ಲಿ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನವದೆಹಲಿಯಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಉನ್ನತ ಮಟ್ಟದ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭದ್ರತಾ ಪಡೆಗಳಿಗೆ ಫ್ರೀ ಹ್ಯಾಂಡ್ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಕದಡಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಗಡಿ ನುಸುಳುವಿಕೆ ತಡೆ ಮತ್ತು ಸ್ಥಳೀಯವಾಗಿ ಉಗ್ರರಿಗೆ ಸಿಗುವ ಬೆಂಬಲವನ್ನು ಕಿತ್ತೊಗೆಯಲು ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಪಡೆಗಳ ನಡುವೆ ಹೆಚ್ಚಿನ ಸಮನ್ವಯಕ್ಕೆ ಸಚಿವರು ಕರೆ ನೀಡಿದರು.
ಜಮ್ಮು ಮತ್ತು ಕಾಶ್ಮೀರವು ಶೀಘ್ರದಲ್ಲೇ ಭಯೋತ್ಪಾದನೆಯಿಂದ ಮುಕ್ತವಾಗಲಿದೆ. ಈ ಗುರಿಯನ್ನು ಸಾಧಿಸಲು ನಾವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.” – ಅಮಿತ್ ಶಾ, ಕೇಂದ್ರ ಗೃಹ ಸಚಿವ
ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

