WPL 2026: ವಿಶ್ವದ ನಂ.1 ತಂಡವಾಗುವುದೇ ನಮ್ಮ ಗುರಿ: ಮಹಿಳಾ ಪ್ರೀಮಿಯರ್ ಲೀಗ್ ದೊಡ್ಡ ಶಕ್ತಿ ಎಂದ ಸ್ಮೃತಿ ಮಂಧಾನ

WPL 2026: ವಿಶ್ವದ ನಂ.1 ತಂಡವಾಗುವುದೇ ನಮ್ಮ ಗುರಿ: ಮಹಿಳಾ ಪ್ರೀಮಿಯರ್ ಲೀಗ್ ದೊಡ್ಡ ಶಕ್ತಿ ಎಂದ ಸ್ಮೃತಿ ಮಂಧಾನ

ಕಳೆದ ನವೆಂಬರ್‌ನಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಂದಿನ ಗುರಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ತಂಡವಾಗುವುದು. ಈ ಮಹತ್ವಾಕಾಂಕ್ಷೆಯ ಪಯಣದಲ್ಲಿ ‘ಮಹಿಳಾ ಪ್ರೀಮಿಯರ್ ಲೀಗ್’ (WPL) ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿ ಸ್ಮೃತಿ ಮಂಧಾನ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ (ಜನವರಿ 9) ರಿಂದ ಆರಂಭವಾಗಲಿರುವ 4ನೇ ಆವೃತ್ತಿಯ ಡಬ್ಲ್ಯೂಪಿಎಲ್ ಪಂದ್ಯಾವಳಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನವಿ ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದೇ ಮೈದಾನದಲ್ಲಿ ಭಾರತ ತಂಡವು ಕಳೆದ ವರ್ಷ ತನ್ನ ಮೊದಲ ಜಾಗತಿಕ ಏಕದಿನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು ಎಂಬುದು ವಿಶೇಷ.

​”ನಾವು ವಿಶ್ವದ ಶ್ರೇಷ್ಠ ತಂಡ ಎನಿಸಿಕೊಳ್ಳಬೇಕಾದರೆ ನಿರಂತರ ಪ್ರದರ್ಶನ ಅಗತ್ಯ. ಏಕದಿನ ವಿಶ್ವಕಪ್ ಗೆಲುವು ನಮಗೆ ಆತ್ಮವಿಶ್ವಾಸ ನೀಡಿದೆ. ಈಗ ಡಬ್ಲ್ಯೂಪಿಎಲ್ ಅಂತಹ ವೇದಿಕೆಗಳು ಯುವ ಆಟಗಾರ್ತಿಯರ ಕೌಶಲವನ್ನು ಹೆಚ್ಚಿಸಿ, ಅಂತರಾಷ್ಟ್ರೀಯ ಕ್ರಿಕೆಟ್‌ನ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತವೆ,” ಎಂದು ಸ್ಮೃತಿ ಹೇಳಿದರು.

​ಮುಂಬರುವ ಟಿ20 ವಿಶ್ವಕಪ್ ಬಗ್ಗೆ ಮಾತನಾಡಿದ ಅವರು, “ಟಿ20 ವಿಶ್ವಕಪ್ ಗೆಲ್ಲುವುದು ನಮ್ಮ ಮುಂದಿನ ದೊಡ್ಡ ಕನಸು. ಈ ಬಾರಿಯ ಡಬ್ಲ್ಯೂಪಿಎಲ್ ಆ ತಯಾರಿಗೆ ಪೂರಕವಾಗಲಿದೆ. ಭಾರತೀಯ ಕ್ರಿಕೆಟ್‌ನಲ್ಲಿ ನಾವು ದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡೆ ರಾಜ್ಯ ರಾಷ್ಟ್ರೀಯ