ಭಾರತದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನವೇ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿದೆ. ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ಕೈಬಿಟ್ಟ ಬೆನ್ನಲ್ಲೇ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ವರ್ಗಾಯಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೊರೆ ಹೋಗಲು ಸಿದ್ಧತೆ ನಡೆಸಿದೆ.

ಏನಿದು ವಿವಾದ? ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ 9.20 ಕೋಟಿ ರೂ. ಮೊತ್ತಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದ್ದ ಮುಸ್ತಫಿಜುರ್ ರಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೂಚಿಸಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಸೂಚನೆಯಂತೆ ಕೆಕೆಆರ್ ಮುಸ್ತಫಿಜುರ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿದೆ.
ಭದ್ರತೆಯ ನೆಪವೊಡ್ಡಿದ ಬಾಂಗ್ಲಾ ಮಂಡಳಿ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಒಬ್ಬ ಬಾಂಗ್ಲಾದೇಶಿ ಆಟಗಾರನಿಗೆ ಒಪ್ಪಂದವಿದ್ದರೂ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಇಡೀ ತಂಡಕ್ಕೆ ಅಲ್ಲಿ ಸುರಕ್ಷತೆ ಇರುತ್ತದೆ ಎಂದು ನಾವು ಹೇಗೆ ನಂಬುವುದು?” ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ಕೋಲ್ಕತ್ತಾದಲ್ಲಿ ನಿಗದಿಯಾಗಿರುವ ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಐಸಿಸಿಗೆ ಪತ್ರ ಬರೆಯುವಂತೆ ಬಿಸಿಬಿಗೆ ಸೂಚನೆ ನೀಡಿದ್ದಾರೆ.
ಫೆಬ್ರವರಿ 7 ರಿಂದ ವಿಶ್ವಕಪ್ ಆರಂಭವಾಗಲಿದ್ದು, ಒಂದು ವೇಳೆ ಐಸಿಸಿ ಈ ಮನವಿಯನ್ನು ಪುರಸ್ಕರಿಸಿದರೆ ಟೂರ್ನಿಯ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಬಿಸಿಸಿಐ ನಿಲುವು ಏನು? ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, “ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಕೆಆರ್ ತಂಡಕ್ಕೆ ಮುಸ್ತಫಿಜುರ್ ಅವರನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ. ಫ್ರಾಂಚೈಸಿಗೆ ಬೇಕಿದ್ದರೆ ಅವರ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ಸಂಬಂಧ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಾಣುತ್ತಿವೆ.

