ಬಳ್ಳಾರಿಯಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಭೀಕರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಆರೋಪದ ಮೇಲೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪವನ್ ನೆಜ್ಜೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಘಟನೆಯ ಹಿನ್ನೆಲೆ: ಬಳ್ಳಾರಿ ನಗರದಲ್ಲಿ ಗುರುವಾರ ಸಂಜೆ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿತ್ತು. ಈ ಮಾರಾಮಾರಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಕೇವಲ 24 ಗಂಟೆಯಲ್ಲೇ ಅಮಾನತು: . ಪವನ್ ನೆಜ್ಜೂರು ಅವರು ಜನವರಿ 1 ರಂದು ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಮರುದಿನವೇ ಈ ಅಹಿತಕರ ಘಟನೆ ನಡೆದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿ, ಅಮಾನತು ಪ್ರಕ್ರಿಯೆಗೆ ಸೂಚಿಸಿದ್ದಾರೆ.

