ಬೆಂಗಳೂರು: (ಡಿಸೆಂಬರ್ 15): ‘ಸಂಗೀತ ಸಾಮ್ರಾಟ’ ಎಂದೇ ಖ್ಯಾತರಾದ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜಾ ಅವರು ಸಂಗೀತ ಲೋಕದಲ್ಲಿ 50 ವರ್ಷಗಳ ತಮ್ಮ ಐತಿಹಾಸಿಕ ಪಯಣವನ್ನು ಆಚರಿಸಲು ಮುಂದಿನ ತಿಂಗಳು ಬೆಂಗಳೂರಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮವು ಅಕ್ಷಯ ಪಾತ್ರ ಫೌಂಡೇಶನ್ನ ಬೆಳ್ಳಿ ಹಬ್ಬದ ಸಂಭ್ರಮಕ್ಕೂ ಸಾಕ್ಷಿಯಾಗಲಿದೆ.

‘ಇಳಯರಾಜಾ 50: ಎ ಲೆಜೆಂಡರಿ ಮ್ಯೂಸಿಕಲ್ ಜರ್ನಿ’ ಎಂಬ ಶೀರ್ಷಿಕೆಯ ಈ ಬೃಹತ್ ಕಾರ್ಯಕ್ರಮವು ಜನವರಿ 10, 2026 ರಂದು ಮದಾವರದಲ್ಲಿರುವ ನೈಸ್ ಮೈದಾನದಲ್ಲಿ ನಡೆಯಲಿದೆ. ಈ ಸಮಾರಂಭವು ಸಂಗೀತ ಪ್ರೇಮಿಗಳಿಗೆ ಅವರ ಹಿಟ್ ಹಾಡುಗಳ ಮಧುರವಾದ ಅನುಭವ ನೀಡಲಿದೆ.
ಈ ವಿಶೇಷ ಕಾರ್ಯಕ್ರಮವು ಅಕ್ಷಯ ಪಾತ್ರ ಫೌಂಡೇಶನ್ನ ಮಹತ್ವದ ಉಪಕ್ರಮವಾದ ‘ಮ್ಯೂಸಿಕ್ ಫಾರ್ ಮೀಲ್ಸ್’ (Music for Meals) ಅನ್ನು ಬೆಂಬಲಿಸಲಿದೆ. ಶಾಲಾ ಮಕ್ಕಳಿಗೆ ಊಟ ನೀಡುವ ಕಾರ್ಯಕ್ರಮಕ್ಕೆ ಜಾಗೃತಿ ಮೂಡಿಸಲು ಮತ್ತು ಬೆಂಬಲ ಕ್ರೋಢೀಕರಿಸಲು ಸಂಗೀತವನ್ನು ವೇದಿಕೆಯಾಗಿ ಬಳಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ಈ ಮೂಲಕ ಇಳಯರಾಜಾ ಅವರ ಸಂಗೀತವು ಒಂದು ಶ್ರೇಷ್ಠ ಸಾಮಾಜಿಕ ಉದ್ದೇಶಕ್ಕಾಗಿ ದ್ವನಿಸಲಿದೆ.

