ವಿಮಾನದಲ್ಲೇ ಅಮೆರಿಕ ಯುವತಿ ಅಸ್ವಸ್ಥ: ಜೀವ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್

ವಿಮಾನದಲ್ಲೇ ಅಮೆರಿಕ ಯುವತಿ ಅಸ್ವಸ್ಥ: ಜೀವ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್

ಬೆಂಗಳೂರು/ನವದೆಹಲಿ: ಮಾಜಿ ಶಾಸಕಿ ಹಾಗೂ ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ಗೋವಾದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಂಕಷ್ಟದಲ್ಲಿದ್ದ ಅಮೆರಿಕದ ಸಹ-ಪ್ರಯಾಣಿಕರೊಬ್ಬರ ಪ್ರಾಣ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆಕಾಶದಲ್ಲಿ ನಡೆದ ಈ ತುರ್ತು ಪರಿಸ್ಥಿತಿಯನ್ನು ಡಾ. ನಿಂಬಾಳ್ಕರ್ ಅವರು ಸಮಯಪ್ರಜ್ಞೆಯಿಂದ ಎದುರಿಸಿ ಯಶಸ್ವಿಯಾಗಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಸಹ-ಪ್ರಭಾರಿ ಆಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ವೋಟ್ ಚೋರಿ’ ರ‍್ಯಾಲಿಗಾಗಿ ದೆಹಲಿಗೆ ತೆರಳುತ್ತಿದ್ದರು. ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ, ಅವರ ಸಹ-ಪ್ರಯಾಣಿಕರಾಗಿದ್ದ ಅಮೆರಿಕದ ಮಹಿಳೆಯೊಬ್ಬರಿಗೆ ತೀವ್ರ ಅಸ್ವಸ್ಥತೆ ಉಂಟಾಯಿತು. ಮಹಿಳೆ ವಿಪರೀತ ನಡುಕದಿಂದ ಕುಸಿದುಬಿದ್ದು, ಪ್ರಜ್ಞಾಹೀನರಾಗಿ, ನಾಡಿಮಿಡಿತವೂ ನಿಂತುಹೋಗಿತ್ತು.ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಡಾ. ನಿಂಬಾಳ್ಕರ್ ಅವರು ತಕ್ಷಣವೇ ತಮ್ಮ ವೈದ್ಯಕೀಯ ಅನುಭವವನ್ನು ಬಳಸಿದರು. ವಿಮಾನದಲ್ಲಿದ್ದ ಸೀಮಿತ ಸೌಲಭ್ಯಗಳ ನಡುವೆಯೂ ಅವರು ಆ ಮಹಿಳೆಗೆ ಕಾರ್ಡಿಯೋ-ಪಲ್ಮನರಿ ರಿಸಸಿಟೇಶನ್ (CPR) ಚಿಕಿತ್ಸೆಯನ್ನು ನೀಡಿದರು. ಅವರ ಅವಿರತ ಪ್ರಯತ್ನದ ಫಲವಾಗಿ ಕೆಲವೇ ಕ್ಷಣಗಳಲ್ಲಿ ಮಹಿಳೆಯ ನಾಡಿಮಿಡಿತ ಮರುಕಳಿಸಿತು. ಅರ್ಧ ಗಂಟೆಯ ನಂತರ ಮಹಿಳೆ ಮತ್ತೊಮ್ಮೆ ಅಸ್ವಸ್ಥಗೊಂಡಾಗ, ಡಾ. ಅಂಜಲಿ ಅವರು ಮತ್ತೆ ಸಿಪಿಆರ್ ನೀಡಿ ಸಂಪೂರ್ಣ ಚೇತರಿಸಿಕೊಳ್ಳಲು ನೆರವಾದರು.

ಸಿಬ್ಬಂದಿ ಮತ್ತು ಸಿಎಂ ಶ್ಲಾಘನೆ:

ಸಂಪೂರ್ಣ ವಿಮಾನ ಪ್ರಯಾಣದ ಅವಧಿಯಲ್ಲಿ ಡಾ. ನಿಂಬಾಳ್ಕರ್ ಅವರು ರೋಗಿಯ ಪಕ್ಕದಲ್ಲೇ ಇದ್ದು, ಅವರ ಸ್ಥಿತಿಯನ್ನು ನಿರಂತರವಾಗಿ ಗಮನಿಸಿದರು. ನವದೆಹಲಿ ವಿಮಾನ ನಿಲ್ದಾಣ ತಲುಪುವ ಮುನ್ನವೇ ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ, ರನ್‌ವೇನಲ್ಲಿಯೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದರು. ವಿಮಾನ ಇಳಿದ ಕೂಡಲೇ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೋಗ್ಯ ಮತ್ತು ಸೌಂದರ್ಯ ರಾಜಕೀಯ ರಾಜ್ಯ