ಬೆಳಗಾವಿ (ಡಿ. 10):ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರಕ್ಕಾಗಿನ ಪೈಪೋಟಿಯ ವಿಷಯವನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಬುಧವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದರು. ಈ ರಾಜಕೀಯ ಅನಿಶ್ಚಿತತೆ ಮತ್ತು ಮುಖ್ಯಮಂತ್ರಿ ಹುದ್ದೆಯ ಕುರಿತ ಸಾರ್ವಜನಿಕ ಚರ್ಚೆಯು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.

ಉತ್ತರ ಕರ್ನಾಟಕದ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ಅಶೋಕ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಗಾದಿಯ ಕಚ್ಚಾಟದ ಬಗ್ಗೆ ಪ್ರಸ್ತಾಪಿಸಿ, ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು.
“ಮುಖ್ಯಮಂತ್ರಿಗಳು ಸದನದಲ್ಲಿಯೇ ಇದ್ದರೂ ಸಹ, ಇತ್ತೀಚೆಗೆ ಕಾಂಗ್ರೆಸ್‌ನ ಓರ್ವ ಎಂಎಲ್‌ಸಿ ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಕರೆದು ಪೋಸ್ಟ್ ಮಾಡಿದ್ದಾರೆ,” ಎಂದು ಆರ್. ಅಶೋಕ ಅವರು ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರ ವಿವಾದಾತ್ಮಕ ಪೋಸ್ಟ್ ಅನ್ನು ಉಲ್ಲೇಖಿಸಿ ಹೇಳಿದರು.
ರಾಜ್ಯದಲ್ಲಿ ನಾಯಕತ್ವದ ಬಗ್ಗೆಯೇ ಸಂಶಯಗಳು ಇದ್ದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆಡಳಿತ ಯಂತ್ರ ಕೋಮಾದಲ್ಲಿದೆ. ಪಕ್ಷದ ಒಳಗಿನ ಈ ಗೊಂದಲಗಳಿಂದಾಗಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಸಿದಿದೆ ಎಂದು ಅವರು ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ‘ಬ್ರೇಕ್‌ಫಾಸ್ಟ್ ಸಭೆ’ ಕೇವಲ ನಾಟಕ. ಇಡ್ಲಿ-ದೋಸೆ ತಿಂದರೆ ಸಮಸ್ಯೆ ಬಗೆಹರಿಯುವುದಿಲ್ಲ, ಮನಸ್ಸು ಬಿಚ್ಚಿ ಮಾತನಾಡಬೇಕು ಎಂದೂ ಅಶೋಕ ವ್ಯಂಗ್ಯವಾಡಿದರು.

