ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಆತಂಕಕಾರಿ ಘಟನೆ ನಡೆದಿದೆ. ನಗರದ ಪಂಚಮಶೀಲನಗರದ ಮನೆಯೊಂದರಲ್ಲಿ ಸ್ನಾನಕ್ಕಾಗಿ ಗ್ಯಾಸ್ ಗೀಸರ್ ಬಳಸುತ್ತಿದ್ದಾಗ ವಿಷಾನಿಲ ಸೋರಿಕೆಯಾಗಿ, ತಾಯಿ ಮತ್ತು ಮಗಳು ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ತಾಯಿ ಮತ್ತು ಮಗಳು ಸ್ನಾನಕ್ಕಾಗಿ ಹೋಗಿದ್ದರು. ದೀರ್ಘ ಸಮಯದ ಬಳಿಕವೂ ಅವರು ಹೊರಗೆ ಬಾರದಿದ್ದಾಗ ಮನೆಯ ಇತರ ಸದಸ್ಯರು ಬಾಗಿಲು ಒಡೆದು ಒಳಗೆ ಹೋದಾಗ, ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಾಗಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.ಪ್ರಾಥಮಿಕ ತನಿಖೆಯ ಪ್ರಕಾರ, ಗೀಸರ್ನಿಂದ ಕಾರ್ಬನ್ ಮೊನಾಕ್ಸೈಡ್ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಾಡದ ಸ್ನಾನದ ಕೋಣೆಯಲ್ಲಿ ಈ ಅನಿಲದ ಪ್ರಮಾಣ ಹೆಚ್ಚಾಗಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಗ್ಯಾಸ್ ಗೀಸರ್ ಬಳಸಿದಾಗ ಇಂಧನ ದಹಿಸಿ ಕಾರ್ಬನ್ ಮೊನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಗಾಳಿಯಾಡದಿದ್ದರೆ ಈ ವಿಷಾನಿಲವು ಪ್ರಜ್ಞೆ ತಪ್ಪಿಸಿ, ಸಾವಿಗೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಗೀಸರ್ ಅನ್ನು ಮುಚ್ಚಿದ ಕೋಣೆಯಲ್ಲಿ ಅಳವಡಿಸದಂತೆ ತಜ್ಞರು ಎಚ್ಚರಿಸುತ್ತಾರೆ.

