ಉಡುಪಿ: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಅವರು ಭಾನುವಾರ ಉಡುಪಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಯಾವುದೇ ಪಾಶ್ಚಿಮಾತ್ಯ ಹಿತಾಸಕ್ತಿ ಗುಂಪುಗಳು ಭಾರತವನ್ನು ಪ್ರದೇಶ ಮತ್ತು ಭಾಷೆಯ ಎಲ್ಲೆಗಳನ್ನು ಮೀರಿ ಒಂದುಗೂಡಿಸಿರುವ ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.

“ಅವರು (ಪಾಶ್ಚಿಮಾತ್ಯರು) ಯುರೋಪಿಯನ್ ಚಿಂತನೆಗಳಿಂದ ಭಾರತೀಯರ ಮೆದುಳನ್ನು ತೊಳೆಯಲು ಪ್ರಯತ್ನಿಸಬಹುದು, ಆದರೆ ಬದಲಿಗೆ ನಾವೇ ಅವರ ಮೇಲೆ ಪ್ರಭಾವ ಬೀರುತ್ತೇವೆ. ವೈದಿಕ ಜ್ಞಾನ ಮತ್ತು ಭಗವದ್ಗೀತೆಯಲ್ಲಿ ಬೇರೂರಿರುವ ಸನಾತನ ಧರ್ಮದ ಶಕ್ತಿ ಅದಾಗಿದೆ,” ಎಂದು ಪವನ್ ಕಲ್ಯಾಣ್ ದೃಢವಾಗಿ ಹೇಳಿದರು.
ಇನ್ನು ತಾವು ‘ನಿಷ್ಕಾಮ ಕರ್ಮ’ ತತ್ವವನ್ನು ಅನುಸರಿಸುವುದಾಗಿ ತಿಳಿಸಿದರು. ಭಗವದ್ಗೀತೆಯ ಈ ಸ್ಫೂರ್ತಿಯಿಂದಲೇ ತಮಗೆ ಶಕ್ತಿ ದೊರೆಯುತ್ತದೆ ಎಂದು ಅವರು ತಿಳಿಸಿದರು.

