ಬೆಂಗಳೂರು (ಡಿ. 7): ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭವಿಷ್ಯದ ಐಪಿಎಲ್ (IPL) ಪಂದ್ಯಗಳು ಮುಂದುವರಿಯಲಿವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಭರವಸೆ ನೀಡಿದರು. ಈ ಘೋಷಣೆಯು, ಕಳೆದ ಐಪಿಎಲ್ ವಿಜಯೋತ್ಸವದ ನಂತರ ನಡೆದ ಕಾಲ್ತುಳಿತದ ದುರ್ಘಟನೆಯಿಂದಾಗಿ ಸ್ಥಳಾಂತರದ ಆತಂಕದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ದೊಡ್ಡ ನಿರಾಳತೆ ನೀಡಿದೆ.

ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯವನ್ನು ಸಂಭ್ರಮಿಸಲು ಕ್ರೀಡಾಂಗಣದಲ್ಲಿ ಅಪಾರ ಜನಸ್ತೋಮ ಸೇರಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಇದರ ನಂತರ, ಸ್ಟೇಡಿಯಂ ಸುರಕ್ಷತೆಯ ಕುರಿತು ವರದಿಗಳು ಬಂದ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷೀಯ ಚುನಾವಣೆಗಳಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಈ ಕುರಿತು ಸ್ಪಷ್ಟನೆ ನೀಡಿದರು. “ನಾವು ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ವರ್ಗಾಯಿಸಲು ಬಿಡುವುದಿಲ್ಲ. ಅದನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಮುಂದುವರಿಸುತ್ತೇವೆ. ಇದು ಕರ್ನಾಟಕ ರಾಜ್ಯ ಮತ್ತು ಬೆಂಗಳೂರಿನ ಗೌರವದ ವಿಷಯ. ದುರಂತಗಳು ಮರುಕಳಿಸದಂತೆ ನಾವು ಅಗತ್ಯ ಭದ್ರತಾ ಕ್ರಮಗಳು ಮತ್ತು ಜನದಟ್ಟಣೆ ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸುತ್ತೇವೆ” ಎಂದು ಅವರು ತಿಳಿಸಿದರು.
ಭವಿಷ್ಯದಲ್ಲಿ ಬೃಹತ್ ಸ್ಟೇಡಿಯಂ ನಿರ್ಮಾಣ
ಭವಿಷ್ಯದಲ್ಲಿ ಹೊಸ ಮತ್ತು ಬೃಹತ್ ಕ್ರಿಕೆಟ್ ಕ್ರೀಡಾಂಗಣವನ್ನು ಸಹ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಈ ವೇಳೆ ಉಪಮುಖ್ಯಮಂತ್ರಿಗಳು ತಿಳಿಸಿದರು.

