ನವದೆಹಲಿ (ಡಿ. 3): ಭಾರತದ ಸೂಪರ್ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಡಿಸೆಂಬರ್ 24 ರಿಂದ ಪ್ರಾರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ ಎಂದು ಡಿಡಿಸಿಎ (DDCA) ಅಧ್ಯಕ್ಷ ರೋಹನ್ ಜೇಟ್ಲಿ ಅವರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.

ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರತರಾಗಿರುವ ಕೊಹ್ಲಿ, ಟೆಸ್ಟ್ ಮತ್ತು ಟಿ20ಐನಿಂದ ದೂರ ಉಳಿದು ಈಗ ಏಕೈಕ ಫಾರ್ಮ್ಯಾಟ್ ಆಟಗಾರರಾಗಿದ್ದಾರೆ. 37 ವರ್ಷದ ಈ ಆಟಗಾರನು ರಾಂಚಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ 52ನೇ ಏಕದಿನ ಶತಕವನ್ನು ಸಿಡಿಸಿ, ಕೇವಲ ಒಂದು ಮಾದರಿಯ ಆಟಗಾರನಾಗಿದ್ದರೂ ಎಂದಿನಂತೆ ಚುರುಕಾಗಿರುವುದನ್ನು ಸಾಬೀತುಪಡಿಸಿದ್ದಾರೆ.
ಕೊಹ್ಲಿ ಅವರು 2010ರ ಫೆಬ್ರವರಿಯಲ್ಲಿ ದೇಶೀಯ ಕ್ರಿಕೆಟ್ ನಲ್ಲಿ ಆಡಿದ ನಂತರ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಗೆ ಮರಳುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ಮರಳುವಿಕೆ ದೆಹಲಿ ಕ್ರಿಕೆಟ್ಗೆ ದೊಡ್ಡ ಉತ್ತೇಜನ ನೀಡಲಿದೆ.

