ದೇಶದ ಆಡಳಿತ ಕೇಂದ್ರಗಳ ಮರುನಾಮಕರಣದ ಸರಣಿ ಮುಂದುವರಿದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಚೇರಿಯ ಹೊಸ ಸಂಕೀರ್ಣಕ್ಕೆ ‘ಸೇವಾ ತೀರ್ಥ’ (Sewa Teerth) ಎಂದು ಹೆಸರಿಡಲಾಗಿದೆ. ಇದರ ಜೊತೆಗೆ, ರಾಜ್ಯಪಾಲರ ನಿವಾಸಗಳಾದ ‘ರಾಜಭವನ’ಗಳನ್ನು ‘ಲೋಕ ಭವನ’ (Lok Bhavan) ಮತ್ತು ‘ರಾಜ್ ನಿವಾಸ’ಗಳನ್ನು ‘ಲೋಕ ನಿವಾಸ’ (Lok Niwas) ಎಂದು ಮರುನಾಮಕರಣ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಸ್ತಾಪಿಸಿ, ‘ಸೇವೆ ಮತ್ತು ಉತ್ತಮ ಆಡಳಿತಕ್ಕೆ’ ಆದ್ಯತೆ ನೀಡುವ ಮೂಲಕ ‘ವಿಕಸಿತ ಮತ್ತು ಶ್ರೇಷ್ಠ ಭಾರತ’ ನಿರ್ಮಾಣದ ಪಯಣದಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಕಚೇರಿ ಇನ್ನು ‘ಸೇವಾ ತೀರ್ಥ’ಕೇಂದ್ರ ವಿಸ್ತಾರಾ ಪುನರಾಭಿವೃದ್ಧಿ ಯೋಜನೆಯಡಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಧಾನಿ ಕಚೇರಿ ಸಂಕೀರ್ಣವನ್ನು ‘ಸೇವಾ ತೀರ್ಥ’ ಎಂದು ಕರೆಯಲಾಗುವುದು. ‘ಅಧಿಕಾರ’ಕ್ಕಿಂತ ‘ಸೇವೆಯ’ ಮನೋಭಾವವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಹೆಸರನ್ನು ಅಂತಿಮಗೊಳಿಸಲಾಗಿದೆ.
‘ರಾಜಭವನ’ದಿಂದ ‘ಲೋಕ ಭವನ’ಕ್ಕೆ ಬದಲಾವಣೆವಸಾಹತುಶಾಹಿ ಕಾಲದ ಸಂಕೇತವಾದ ‘ರಾಜ’ ಪದವನ್ನು ಕೈಬಿಟ್ಟು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಭಾಗವಾಗಿ ‘ರಾಜಭವನ’ಗಳನ್ನು ‘ಲೋಕ ಭವನ’ ಮತ್ತು ‘ರಾಜ್ ನಿವಾಸ’ಗಳನ್ನು ‘ಲೋಕ ನಿವಾಸ’ ಎಂದು ಬದಲಾಯಿಸುವ ನಿರ್ದೇಶನವನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ.ಈಗಾಗಲೇ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬದಲಾವಣೆಯನ್ನು ಜಾರಿಗೊಳಿಸಿವೆ.
ಸೇವೆಯೇ ಕೇಂದ್ರಬಿಂದು:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಕಳೆದ 11 ವರ್ಷಗಳಿಂದ ‘ಅಧಿಕಾರ’ಕ್ಕಿಂತ ‘ಸೇವೆಗೆ’ ಸಮಾನಾರ್ಥಕವಾಗಿದೆ. ಪ್ರಧಾನಮಂತ್ರಿಯವರು ತಮ್ಮನ್ನು ‘ಪ್ರಧಾನ ಸೇವಕ’ ಎಂದು ಪರಿಗಣಿಸಿ, ಜನರ ಸೇವೆಗಾಗಿ 24×7 ದುಡಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

