ಬೆಂಗಳೂರು: (ಡಿ. 2) ಪ್ರಸಿದ್ಧ ಉಪಾಹಾರ ಗೃಹ ‘ರಾಮೇಶ್ವರಂ ಕೆಫೆ’ (Rameshwaram Cafe) ಮಾಲೀಕರು ಮತ್ತು ಒಬ್ಬ ಪ್ರತಿನಿಧಿ ಸೇರಿದಂತೆ ಮೂವರ ವಿರುದ್ಧ ‘ಹಾನಿಕಾರಕ ಆಹಾರ’ ಮಾರಾಟ, ಕ್ರಿಮಿನಲ್ ಒಳಸಂಚು ಮತ್ತು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಆಹಾರ ಸುರಕ್ಷತಾ ಉಲ್ಲಂಘನೆ ಮತ್ತು ನಂತರದಲ್ಲಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ನಿಖಿಲ್ ಎನ್. ಎಂಬುವವರು ನೀಡಿದ ದೂರಿನ ಮೇರೆಗೆ, ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ , ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮೀನಾರಾಯಣ್ ಅವರ ವಿರುದ್ಧ ನವೆಂಬರ್ 29ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯು ಈ ವರ್ಷದ ಜುಲೈ 24 ರಂದು ಕೆಐಎ ಟರ್ಮಿನಲ್ 1 ರಲ್ಲಿ ನಡೆದಿದ್ದು, ದೂರುದಾರ ನಿಖಿಲ್ ಅವರು ಗುವಾಹಟಿಗೆ ವಿಮಾನ ಏರಲು ವಿಮಾನ ನಿಲ್ದಾಣದಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಸಾರಾಂಶ
ದೂರುದಾರರಾದ ನಿಖಿಲ್ ಅವರು ತಾವು ಸೇವಿಸಿದ ಆಹಾರದಲ್ಲಿ ಕೀಟ ಕಂಡುಬಂದಿದೆ ಎಂದು ಆರೋಪಿಸಿದ್ದರು. ಇದರ ಬಗ್ಗೆ ಕೆಫೆಯ ಸಿಬ್ಬಂದಿಗೆ ತಿಳಿಸಿದಾಗ ಅವರು ಆಹಾರವನ್ನು ಬದಲಾಯಿಸಲು ಮುಂದಾಗಿದ್ದರು. ಆದರೆ, ವಿಮಾನದ ಸಮಯವಾಗಿದ್ದರಿಂದ ಅವರು ದೂರು ನೀಡದೆ ತೆರಳಿದ್ದರು. ಮರುದಿನ, ಕೆಫೆ ಪರವಾಗಿ ಸುಮಂತ್ ಲಕ್ಷ್ಮೀನಾರಾಯಣ್ ಅವರು ನಿಖಿಲ್ ಮತ್ತು ಅವರ ಸ್ನೇಹಿತರ ವಿರುದ್ಧ ಸುಳ್ಳು ದೂರು ನೀಡಿ, 25 ಲಕ್ಷ ರೂಪಾಯಿ ಸುಲಿಗೆಗೆ ಪ್ರಯತ್ನಿಸಿದ್ದಾರೆ ಮತ್ತು ಕೆಫೆ ಬ್ರ್ಯಾಂಡ್‌ನ ಗೌರವಕ್ಕೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನ ಮೇಲೆ ಪೊಲೀಸರು ನಿಖಿಲ್ ಮತ್ತು ಇತರರನ್ನು ವಿಚಾರಣೆಗೆ ಕರೆಸಿದ್ದರು.
ಪೊಲೀಸರ ತನಿಖೆ ಮತ್ತು ಪ್ರತಿದೂರು
ನಂತರದಲ್ಲಿ ಪೊಲೀಸರ ತನಿಖೆಯಲ್ಲಿ ನಿಖಿಲ್ ಮತ್ತು ಅವರ ಸ್ನೇಹಿತರ ವಿರುದ್ಧ ಸುಲಿಗೆ ಅಥವಾ ಬ್ಲಾಕ್‌ಮೇಲ್ (Blackmail) ಆರೋಪಗಳಿಗೆ ಯಾವುದೇ ಪುರಾವೆಗಳು ದೊರೆತಿಲ್ಲ. ತಮಗೆ ಆಗಿರುವ ಮಾನಹಾನಿ ಮತ್ತು ಕಿರುಕುಳಕ್ಕೆ ಪ್ರತಿಯಾಗಿ, ನಿಖಿಲ್ ಅವರು ಕೆಫೆ ಮಾಲೀಕರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ಪ್ರತಿದೂರಿನ ಆಧಾರದ ಮೇಲೆ ಕೆಫೆ ಮಾಲೀಕರು ಮತ್ತು ಕಾರ್ಯನಿರ್ವಾಹಕರ ವಿರುದ್ಧ ಐಪಿಸಿ (ಈಗ ಬಿಎನ್ಎಸ್) ಕಲಂ 308 (ಹಾನಿಕಾರಕ ಆಹಾರ), 123 (ಕ್ರಿಮಿನಲ್ ಒಳಸಂಚು) ಮತ್ತು 228 (ಸುಳ್ಳು ಸಾಕ್ಷ್ಯ ಸೃಷ್ಟಿಸುವುದು) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

