ವಿಕಲಚೇತನರ ಗೌರವ ರಕ್ಷಣೆಗೆ ಹೊಸ ಕಾಯಿದೆ ಅಗತ್ಯ: ಕಠಿಣ ಕಾನೂನಿಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್  ಸೂಚನೆ

ವಿಕಲಚೇತನರ ಗೌರವ ರಕ್ಷಣೆಗೆ ಹೊಸ ಕಾಯಿದೆ ಅಗತ್ಯ: ಕಠಿಣ ಕಾನೂನಿಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ವಿಕಲಚೇತನರ ಗೌರವವನ್ನು ಕಾಪಾಡಲು ಮತ್ತು ಅವರ ವಿರುದ್ಧ ಆನ್‌ಲೈನ್ ವೇದಿಕೆಗಳಲ್ಲಿ ಮಾಡುವ ಅವಹೇಳನಕಾರಿ ಟಿಪ್ಪಣಿಗಳು ಅಥವಾ ಅಪಹಾಸ್ಯಗಳನ್ನು ನಿಭಾಯಿಸಲು ಕಠಿಣ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (SC/ST) ಕಾಯಿದೆಯ ಮಾದರಿಯಲ್ಲಿ, ವಿಕಲಚೇತನರು ಮತ್ತು ಅಪರೂಪದ ಆನುವಂಶಿಕ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗೇಲಿ ಮಾಡುವ ಅಥವಾ ಅವಮಾನಿಸುವ ಹೇಳಿಕೆಗಳನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರುವ ಬಗ್ಗೆ ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಳಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠವು, ಆನ್‌ಲೈನ್ ವೇದಿಕೆಗಳಲ್ಲಿನ ಅಶ್ಲೀಲ, ಆಕ್ಷೇಪಾರ್ಹ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದು ಒತ್ತಿಹೇಳಿತು.ಅಂಗವಿಕಲರ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ನಿಭಾಯಿಸಲು ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಕ್ರಿಯೆಯಲ್ಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ಹಾಸ್ಯವನ್ನು ಸಹಿಸಲಾಗದು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ರಾಷ್ಟ್ರೀಯ